14 ಸಾವಿರ ಮಂದಿಗೆ ಹಾವು ಕಡಿತ, 111 ಜನ ಬಲಿ! ಅಚ್ಚರಿ ಮಾಹಿತಿ ಸರ್ಕಾರಕ್ಕೆ ಲಭ್ಯ

ವಿಜಯವಾಣಿ (5)
Published on

| ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಹಾವು ಕಡಿತವನ್ನು ‘ಘೋಷಿತ ಕಾಯಿಲೆ’ ಎಂದು ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಅಚ್ಚರಿ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಇಷ್ಟು ವರ್ಷಗಳವರೆಗೂ ಹಾವು ಕಡಿತದಿಂದ ಮೃತರಾಗುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದರೂ, ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಅಥವಾ ಚಿಕಿತ್ಸೆಗೆ ವ್ಯವಸ್ಥೆ ರೂಪಿಸುವ ವಿಷಯದಲ್ಲಿ ಸ್ಪಷ್ಟತೆ ಇರಲಿಲ್ಲ. ಹಾಗಾಗಿ 2024ರ ಫೆ.13ರಂದು ಹಾವು ಕಡಿತವನ್ನು ಘೋಷಿತ ಕಾಯಿಲೆ ಎಂದು ಅಧಿಸೂಚನೆ ಹೊರಡಿಸುವ ಮೂಲಕ ಒಂದು ಚೌಕಟ್ಟು ಹಾಕಿಕೊಳ್ಳಲಾಗಿದೆ.

ಆ ಪ್ರಕಾರ ರಾಜ್ಯದ ಯಾವುದೇ ಮೂಲದಲ್ಲಿ ಹಾವು ಕಡಿತದ ಪ್ರಕರಣವನ್ನು ನಿಗದಿತ ನಮೂನೆಯಲ್ಲಿ ಸರ್ಕಾರಕ್ಕೆ ವರದಿ ಮಾಡುವುದು ಕಡ್ಡಾಯವಾಗಿದೆ. ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡುವುದಕ್ಕೆ ಅವಕಾಶ ಸಿಕ್ಕಿದೆ ಮತ್ತು ಸರ್ಕಾರಕ್ಕೆ ಇಡೀ ಸಮಗ್ರ ಚಿತ್ರಣವೂ ಸಿಗಲಾರಂಭವಾಗಿದೆ. ಹಾವು ಕಡಿತ ಮರಣಗಳನ್ನು ತಗ್ಗಿಸಲು, ಎಲ್ಲ್ಲ ಹಾವು ಕಡಿತದ ಮರಣ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡೆತ್ ಆಡಿಟ್ ಕೂಡ ನಡೆಸುವ ಪದ್ಧತಿ ಜಾರಿಗೆ ತರಲಾಗಿದೆ. 2024ರ ಫೆ.13ರಿಂದ 2025ರ ಮಾ.9ರ ಅವಧಿಯಲ್ಲಿ 14,420 ಹಾವು ಕಡಿತ ಪ್ರಕರಣ ವರದಿಯಾಗಿದ್ದು, 111 ಮಂದಿ ಮರಣ ಹೊಂದಿದ್ದಾರೆ. ಇತ್ತೀಚಿನ ಮಾಹಿತಿಯನ್ನು ನೋಡುವುದಾದರೆ 2025ರ ಜನವರಿಯಿಂದ 2024ರ ಮಾರ್ಚ್ ಆರಂಭದವರೆಗೆ 1,754 ಹಾವು ಕಡಿತದ ಪ್ರಕರಣ ದಾಖಲಾಗಿದ್ದು, 11 ಮಂದಿ ಜೀವ ತೆತ್ತಿದ್ದಾರೆ.

ಸರ್ಕಾರಿ ವ್ಯವಸ್ಥೆ: ಹಾವು ಕಡಿತದ ಚಿಕಿತ್ಸೆಗೆ ಅಗತ್ಯ ಔಷಧಗಳನ್ನು ಪ್ರಕರಣಗಳ ಅನುಸಾರ ಸರಬರಾಜು ಮಾಡಲಾಗುತ್ತಿದೆ ಎಂಬುದು ಆರೋಗ್ಯ ಇಲಾಖೆ ವಿವರಣೆಯಾಗಿದೆ. ಹಾವು ಕಡಿತದ ಚಿಕಿತ್ಸೆಗೆ ನೀಡುವ ಆಂಟಿ ಸ್ನೇಕ್ ವೆನೊಮ್ (ಎಎಸ್​ವಿ)ಯನ್ನು ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿಸಿದ್ದು, ಆದ ಕಾರಣ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾತ್ರೆಗಳಲ್ಲಿ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ಸಕಾಲಕ್ಕೆ ಉಚಿತವಾಗಿ ಚಿಕಿತ್ಸೆ ದೊರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ.

ವೈದ್ಯಾಧಿಕಾರಿಗಳು ಹಾಗೂ ಇತರ ಆರೋಗ್ಯ ಸಿಬ್ಬಂದಿಗೆ ವಿವಿಧ ಹಂತಗಳಲ್ಲಿ ಹಾವು ಕಡಿತ ಚಿಕಿತ್ಸೆ ತರಬೇತಿ ನೀಡಲಾಗಿದೆ. ಸಮುದಾಯದಲ್ಲಿ ಹಾವು ಕಡಿತ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಬಗ್ಗೆ ಅರಿವು ಮೂಡಿಸಲು ಮತ್ತು ಹಾವು ಕಚ್ಚಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡುವ ಬಗ್ಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಐಇಸಿ ಚಟುವಟಿಕೆ ನಡೆಸಲಾಗುತ್ತಿದೆ. ಇನ್ನು ಎಂಪ್ಯಾನಲ್ಡ್ ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ಪ್ರಕರಣಗಳಿಗೆ ಚಿಕಿತ್ಸೆ ನೀಡಿದಾಗ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಅಡಿ ಖರ್ಚಾದ ವೆಚ್ಚ ಕ್ಲೇಮ್ ಮಾಡಿಕೊಳ್ಳಲು ವ್ಯವಸ್ಥೆ ಇದೆ ಮತ್ತು ಯಾವುದೇ ಹಾವು ಕಡಿತ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗೆ ಬಂದಾಗ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಚಿಕಿತ್ಸೆ ನೀಡಬೇಕೆಂಬ ಮಾನದಂಡ ಹಾಕಿಕೊಳ್ಳಲಾಗಿದೆ. ಭಾರತ ಸರ್ಕಾರವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಕರ್ನಾಟಕಕ್ಕೆ ತರಬೇತಿ ಮತ್ತು ಮೇಲ್ವಿಚಾರಣೆ, ಸರ್ವೆಕ್ಷಣೆಗಾಗಿ ಅನುದಾನ ಕೂಡ ಬಿಡುಗಡೆ ಮಾಡಿದೆ.

ನಾಟಿ ಚಿಕಿತ್ಸಕರ ಮೇಲೆ ಕ್ರಮ

ಸಾಂಪ್ರದಾಯಿಕ, ನಾಟಿ ಚಿಕಿತ್ಸಕರಿಂದಾಗಿ ಹಾವು ಕಡಿತದ ಪ್ರಕರಣಗಳು ಆಸ್ಪತ್ರೆಗೆ ಸೇರುವುದು ತಡವಾದಲ್ಲಿ ಅಥವಾ ಮರಣ ಹೊಂದಿದಲ್ಲಿ ಅವರ ಮೇಲೆ ಕೆಪಿಎಂಇ ಕಾಯ್ದೆಯಡಿ ಜಿಲ್ಲಾ ಮಟ್ಟದಲ್ಲಿ ಕ್ರಮವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಜಿಲ್ಲಾವಾರು ಸಾವು ಪ್ರಕರಣ (2024ರಲ್ಲಿ 100 ಪ್ರಕರಣ)

ತುಮಕೂರು-14, ಮಂಡ್ಯ-9, ಬಳ್ಳಾರಿ, ಕಲಬುರಗಿ, ಕೊಪ್ಪಳ -8, ವಿಜಯನಗರ-7, ಬಾಗಲಕೋಟೆ, ಶಿವಮೊಗ್ಗ- 6, ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ -4, ಬೆಳಗಾವಿ, ಬೀದರ್, ಚಿಕ್ಕಮಗಳೂರು, ಹಾವೇರಿ, ಕೋಲಾರ, ಯಾದಗಿರಿ-3, ಧಾರವಾಡ, ಹಾಸನ, ರಾಯಚೂರು, ರಾಮನಗರ, ಉಡುಪಿ, ವಿಜಯಪುರ -2, ಬೆಂಗಳೂರು ಗ್ರಾ., ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕೊಡಗು -1.

ಎಲ್ಲಿ ಹೆಚ್ಚು?

ಜಗತ್ತಿನಾದ್ಯಂತ 2000 ಹಾವಿನ ಪ್ರಭೇದಗಳಿದ್ದು, ಅದರಲ್ಲಿ 300 ಪ್ರಭೇದದ ಹಾವುಗಳು ಭಾರತ- ಕರ್ನಾಟಕದಲ್ಲಿವೆ. ಅವುಗಳಲ್ಲಿ 52 ಪ್ರಭೇದ ವಿಷಪೂರಿತ. ಉಷ್ಣ ವಲಯ ಮತ್ತು ಶೀತ ವಲಯಗಳಲ್ಲಿ ಹಾಗೂ ಅತೀ ಹೆಚ್ಚು ಮಳೆ ಅತಿ ಹೆಚ್ಚು ಉಷ್ಣಾಂಶ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಹಾವು ಕಡಿತ ಪ್ರಕರಣ ವರದಿಯಾಗುತ್ತಿವೆ.

ಮರಣಗಳ ಲೆಕ್ಕ ಪರಿಶೋಧನೆ

ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆ ಮುಂದಾಗಿದ್ದು, ಎಚ್1ಎನ್1 ಮರಣದ ಲೆಕ್ಕ ಪರಿಶೋಧನಾ ಸಮಿತಿಗೆ ಹಾವು ಕಡಿತದಿಂದಾಗಿ ಸಂಭವಿಸುವ ಮರಣಗಳ ಲೆಕ್ಕ ಪರಿಶೋಧನೆ ಜವಾಬ್ದಾರಿ ವಹಿಸಿ ಆದೇಶ ಹೊರಡಿಸಿದೆ. ಕೆಲವು ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತ ಪ್ರಕರಣ ಹಾಗೂ ಸಾವು ಪ್ರಕರಣಗಳನ್ನು ವರದಿ ಮಾಡುತ್ತಿಲ್ಲ. ಜತೆಗೆ ಹಾವು ಕಡಿತಕ್ಕೆ ತುತ್ತಾದವರು ಆಸ್ಪತ್ರೆಗೆ ಬಾರದೆ ಸಾಂಪ್ರದಾಯಿಕ ಚಿಕಿತ್ಸೆಗೆ ಹೋಗಿ ಮೃತರಾಗುತ್ತಿದ್ದಾರೆ.

ಇದು ಕೂಡ ಮರಣ ಉಂಟಾಗಲು ಕಾರಣ ಆಗುತ್ತಿರಬಹುದು. ಹೀಗಾಗಿ ಹಾವು ಕಡಿತ ಮೇಲ್ವಿಚಾರಣೆ ನಡೆಸಲು ಎಚ್1ಎನ್1 ಮರಣದ ಲೆಕ್ಕ ಪರಿಶೋಧನಾ ಸಮಿತಿಗೆ ಜವಾಬ್ದಾರಿ ವಹಿಸಲಾಗಿದೆ. ಜತೆಗೆ ಹಾವು ಕಡಿತದಿಂದಾಗಿ ಸಂಭವಿಸುವ ಮರಣಗಳ ಲೆಕ್ಕ ಪರಿಶೋಧನೆಯನ್ನು ಪರಿಶೀಲಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲೆಯಲ್ಲಿರುವ ಹಾವು ಕಡಿತ ಪ್ರಕರಣಗಳ ಪರಿಶೀಲನಾ ಸಭೆಗಳನ್ನು ಪ್ರತಿ 3 ತಿಂಗಳಿಗೆ ಒಮ್ಮೆಯಾದರೂ ನಡೆಸಬೇಕು. ರಾಷ್ಟ್ರೀಯ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ (ಎನ್​ಪಿಎಸ್​ಇ) ಜಾರಿಗೊಳಿಸಬೇಕು. ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಉಂಟಾಗುವ ಸವಾಲು ಸರಿಪಡಿಸಿ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಬಗ್ಗೆ ಆದೇಶದಲ್ಲಿ ತಿಳಿಸಿದೆ.

ಹಾವು ಕಡಿತವನ್ನು ಇಷ್ಟು ವರ್ಷಕಾಲ ಸರ್ಕಾರ ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಒಂದು ವ್ಯವಸ್ಥೆ ರೂಪಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇನ್ನಷ್ಟು ಪರಿಪಕ್ವವಾಗಬೇಕು. ಈಗ ಲಭ್ಯವಾಗಿರುವ ಮಾಹಿತಿ ತೃಪ್ತಿಕರವಾಗಿಲ್ಲ. ಇನ್ನೂ ಹೆಚ್ಚಿನ ಪ್ರಕರಣ ನಡೆಯುವ ಅಂದಾಜಿದೆ. ಅಲ್ಲದೆ, ಹಾವು ಕಡಿತದ ನಂತರ ಚಿಕಿತ್ಸೆಗೆ ಇನ್ನಷ್ಟು ಆದ್ಯತೆ ಕೊಡಬೇಕಾಗಿದೆ. | ಗೌರಿಶಂಕರ್ ಉರಗತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net