

ವಿಜಯವಾಣಿ ಸುದ್ದಿಜಾಲ ನವದೆಹಲಿ
ದೇಶಾದ್ಯಂತ 40 ಲಕ್ಷ ನೇರ, ಪರೋಕ್ಷ ಉದ್ಯೋಗ ಸೃಷ್ಟಿಗಾಗಿ 12 ಕೈಗಾರಿಕಾ ಸ್ಮಾರ್ಟ್ಸಿಟಿ ನಿರ್ವಣಕ್ಕೆ ತೀರ್ವನಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರವೀಗ ದೇಶದ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತು ದೇಶಾದ್ಯಂತ ಆಹಾರ ಭದ್ರತೆ ಹೆಚ್ಚಿಸುವ ಆಶಯದೊಂದಿಗೆ 13,966 ಕೋಟಿ ರೂ.ಗಳ ಪ್ಯಾಕೇಜ್ಗೆ ಅನುಮೋದನೆ ನೀಡಿದೆ. ಕೃಷಿ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ರೈತರ ಜೀವನವನ್ನು ಸುಧಾರಿಸುವ ಆಶಯದೊಂದಿಗೆ ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಏಳು ಪ್ರಮುಖ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಸೆಮಿಕಂಡಕ್ಟರ್ ಉತ್ಪಾದನಾ ಘಟಕ: ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿ, ಕೇನ್ಸ್ ಸೆಮಿಕಾನ್ ಪ್ರೖೆ. ಲಿ.ಮೂಲಕ ಗುಜರಾತ್ನ ಸಾನಂದ್ನಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ನಿರ್ವಣಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಘಟಕವು ರೂ. 3,300 ಕೋಟಿ ಹೂಡಿಕೆಯೊಂದಿಗೆ ಸ್ಥಾಪನೆಗೊಳ್ಳಲಿದೆ.
ಹೊಸ ರೈಲು ಮಾರ್ಗಕ್ಕೆ ಸಮ್ಮತಿ: ಮುಂಬೈ- ಇಂದೋರ್ ನಡುವಿನ 309 ಕಿಮೀ ಉದ್ದದ ರೂ. 18,036 ವೆಚ್ಚದ ಹೊಸ ರೈಲು ಮಾರ್ಗ ಯೋಜನೆಗೆ ಕ್ಯಾಬಿನೆಟ್ ಸಮ್ಮತಿಸಿದೆ. ಈ ರೈಲು ಮಾರ್ಗ ಮುಂಬೈ ಮತ್ತು ಇಂದೋರ್ನ ನಡುವಿನ ಅತಿ ಕಡಿಮೆ ಅವಧಿಯಲ್ಲಿ ಕ್ರಮಿಸುವ ರೈಲು ಸಂಪರ್ಕ ಯೋಜನೆಯಾಗಿದೆ. 2028-29 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
1. ಡಿಜಿಟಲ್ ಕೃಷಿ ಮಿಷನ್ : ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ರಚನೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 20,817 ಕೋಟಿ ರೂ. ವೆಚ್ಚದ ಹೂಡಿಕೆಯೊಂದಿಗೆ ಡಿಜಿಟಲ್ ಕೃಷಿ ಮಿಷನ್ ಸ್ಥಾಪನೆಗೊಳ್ಳಲಿದೆ.
2. ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ : ದೇಶದ ಜನರಿಗೆ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಖಚಿತ ಪಡಿಸಿಕೊಳ್ಳಲು ರೂ. 3,979 ಕೋಟಿ ವೆಚ್ಚದ ಯೋಜನೆ ಘೋಷಿಸಲಾಗಿದೆ. ಹಸಿವು ಮತ್ತು ಅಪೌಷ್ಟಿಕತೆ ನಿಭಾಯಿಸುವ ಈ ಯೋಜನೆ ಪೌಷ್ಟಿಕ ಆಹಾರದ ಲಭ್ಯತೆಯನ್ನೂ ಸುಧಾರಿಸಲಿದೆ.
3. ಕೃಷಿ ಶಿಕ್ಷಣ, ನಿರ್ವಹಣಾ ಯೋಜನೆ : ಕೃಷಿ ಶಿಕ್ಷಣ ಮತ್ತು ನಿರ್ವಹಣೆ ಹೆಚ್ಚಿಸಲು ರೂ. 2,291 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಈ ಉಪಕ್ರಮ ರೈತರಿಗೆ ತರಬೇತಿ ಮತ್ತು ಶಿಕ್ಷಣ ನೀಡುವ ಗುರಿ ಹೊಂದಿದೆ. ರೈತರ ಉತ್ಪಾದಕತೆ, ಆದಾಯ ಸುಧಾರಿಸಲು ಅಗತ್ಯ ಕೌಶಲ್ಯ ಒದಗಿಸಲಿದೆ.
4. ತೋಟಗಾರಿಕೆ ಯೋಜನೆ : ಹಣ್ಣು, ತರಕಾರಿ ಮತ್ತು ಇತರ ಬೆಳೆಗಳ ಬೆಳವಣಿಗೆ ಉತ್ತೇಜಿಸುವ ಮೇಲೆ ಕೇಂದ್ರೀಕರಿಸುವ ರೂ. 860 ಕೋಟಿ ಮೌಲ್ಯದ ತೋಟಗಾರಿಕೆ ಯೋಜನೆ ಇದಾಗಿದೆ. ಕೃಷಿಯನ್ನು ವೈವಿಧ್ಯಗೊಳಿಸಲು, ಸುಸ್ಥಿರ ಕೃಷಿ ಪದ್ಧತಿ ಪೋ›ತ್ಸಾಹಿಸುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ.
5. ಜಾನುವಾರು ಆರೋಗ್ಯ ನಿರ್ವಹಣೆ ಮತ್ತು ಉತ್ಪಾದನಾ ಯೋಜನೆ : ಜಾನುವಾರು ಆರೋಗ್ಯ ನಿರ್ವಹಣೆ ಮತ್ತು ಉತ್ಪಾದನೆಗೆ -ಠಿ;1,702 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದು ಪ್ರಾಣಿಗಳ ಆರೋಗ್ಯ ಸೇವೆಗಳನ್ನು ಸುಧಾರಿಸಲಿದೆ. ಮತ್ತು ಡೈರಿ ಮತ್ತು ಮಾಂಸದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
6. ಕೃಷಿ ವಿಜ್ಞಾನ ಕೇಂದ್ರದ ಬಲವರ್ಧನೆ : ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ನೆಟ್ವರ್ಕ್ಗೆ ರೂ. 1,202 ಕೋಟಿ ಮೀಸಲಿಡಲಿದೆ. ಆಧುನಿಕ ಕೃಷಿ ತಂತ್ರಗಳನ್ನು ಉತ್ತೇಜಿಸುವಲ್ಲಿ ಮತ್ತು ರೈತರಿಗೆ ಸ್ಥಳದಲ್ಲೇ ಅಗತ್ಯ ಬೆಂಬಲ ಒದಗಿಸುವಲ್ಲಿ ಈ ಕೇಂದ್ರಗಳು ನಿರ್ಣಾಯಕ ಪಾತ್ರ ವಹಿಸಲಿವೆ.
7. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ : ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗಾಗಿ ರೂ. 1,115 ಕೋಟಿ ವೆಚ್ಚದ ಯೋಜನೆಗೂ ಸಮ್ಮತಿಸಲಾಗಿದೆ. ಈ ಯೋಜನೆಯು ಭಾರತದಲ್ಲಿ ಕೃಷಿಯ ದೀರ್ಘಾವಧಿಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೇಲೆ ಕೇಂದ್ರೀಕರಿಸಲಿದೆ.