

ನೈಮಿ: ಶಸ್ತ್ರಸಜ್ಜಿತ ಬಂಡುಕೋರರು ಮೂರು ಹಳ್ಳಿಗಳ ಮೇಲೆ ದಾಳಿ ಮಾಡಿ 137 ಜನರನ್ನು ಕೊಂದು ಹಾಕಿರುವ ಘಟನೆ ನೈಜರ್ (ಪಶ್ಚಿಮ ಆಫ್ರಿಕಾ) ದೇಶದ ನೈರುತ್ಯ ಭಾಗದ ಮಾಲಿ ಗಡಿಯಲ್ಲಿ ಭಾನುವಾರ ನಡೆದಿದೆ.
ಈ ಭೀಕರ ದಾಳಿ ಬಗ್ಗೆ ಇಂದು ಹೇಳಿಕೆ ಬಿಡುಗಡೆ ಮಾಡಿರುವ ನೈಜರ್ ಗೃಹ ಸಚಿವಾಲಯ ಸಾವಿನ ಸಂಖ್ಯೆ ಅಧಿಕೃತವಾಗಿ 137 ಎಂದು ಹೇಳಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಭೀಕರ ದಾಳಿಯಿದಾಗಿದೆ ಎಂದು ಅದು ಹೇಳಿದೆ.
ಇದುವರೆಗೂ ಘಟನೆಯ ಹೊಣೆಯನ್ನೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲವಾದರೂ, ಐಸಿಸ್ ಉಗ್ರರು ಇದರ ಹಿಂದೆ ಇದ್ದಾರೆ ಎಂದು ಜೈಜರ್ ಸರ್ಕಾರ ಅನುಮಾನ ವ್ಯಕ್ತಪಡಿಸಿದೆ. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಏಕಾಏಕಿ ಹಳ್ಳಿಗಳ ಮೇಲೆ ದಾಳಿ ಮಾಡಿದ ಉಗ್ರರು, ಮನಸೋಇಚ್ಚೆ ಗುಂಡು ಹಾರಿಸಿ ಅಮಾಯಕರ ಪ್ರಾಣ ತಗದಿದ್ದಾರೆ. ಘಟನೆ ಖಂಡಿಸಿ ನೈಜರ್ ಸರ್ಕಾರ ರಾಷ್ಟ್ರದಲ್ಲಿ ಮೂರು ದಿನ ಶೋಕಾಚರಣೆಗೆ ಕರೆ ನೀಡಿದೆ.
ಘಟನೆ ನಡೆದ ಭಾಗದಲ್ಲಿ ಆಲ್ ಕೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರರ ಹಾವಳಿ ಹೆಚ್ಚಾಗಿದೆ. ಈ ಘಟನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಖಂಡಿಸಿದೆ.