ರಾಷ್ಟ್ರದಲ್ಲಿ ಮುಂದುವರಿದ ಕರೊನಾ ಹೆಮ್ಮಾರಿಯ ಅಟ್ಟಹಾಸ: 500 ಗಡಿ ದಾಟಿದ ಸಾವಿನ ಸಂಖ್ಯೆ, ಸೋಂಕಿತರು ಹೆಚ್ಚಳ

covid paint
Published on

ನವದೆಹಲಿ: ದಿನೇ ದಿನೆ ಕರೊನಾ ಹೆಮ್ಮಾರಿಯ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ರಾಷ್ಟ್ರದಲ್ಲಿ 1,334 ಹೊಸ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 15,712ಕ್ಕೇರಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, 27 ಹೊಸ ಪ್ರಕರಣಗಳೊಂದಿಗೆ ಒಟ್ಟು 507 ಮಂದಿ ಕರೊನಾ ಮೃತ್ಯಕೂಪಕ್ಕೆ ಈವರೆಗೂ ಬಲಿಯಾಗಿದ್ದಾರೆ.

ಭಾನುವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​, ಕಳೆದ 28 ದಿನಗಳಲ್ಲಿ ಕರ್ನಾಟಕದ ಕೊಡಗು ಮತ್ತು ಪುದುಚೇರಿಯ ಮಾಹೆಯಲ್ಲಿ ಯಾವುದೇ ಹೊಸ ಕೋವಿಡ್​-19 ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದರು.

ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ರಾಜ್ಯಗಳ 54 ಜಿಲ್ಲೆಗಳಲ್ಲಿಯೂ ಕಳೆದ 14 ದಿನಗಳಿಂದ ಯಾವುದೇ ಕರೊನಾ ಪ್ರಕರಣಗಳು ಕಂಡುಬಂದಿಲ್ಲ. ಸೋಂಕಿತರಲ್ಲಿ ಇಲ್ಲಿಯವರೆಗೆ 2,231 ಮಂದಿ ಗುಣಮುಖರಾಗಿದ್ದಾರೆಂದು ಮಾಹಿತಿ ನೀಡಿದರು.

ದೇಶದಲ್ಲಿ ಕೋವಿಡ್​ಗಾಗಿಯೇ 755 ಆಸ್ಪತ್ರೆಗಳು ಮತ್ತು 1,389 ಆರೋಗ್ಯ ಕೇಂದ್ರಗಳು ಮೀಸಲಾಗಿವೆ. ಗಂಭೀರವಾದ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಂತಹ 2,144 ಮೀಸಲು ಸೌಲಭ್ಯವಿದೆ ಎಂದು ಲಾವ್​ ಅಗರ್ವಾಲ್​ ವಿವರಿಸಿದರು.

ಇದೇ ವೇಳೆ ಲಾಕ್​ಡೌನ್​ ಸಡಿಲಿಕೆ ಬಗ್ಗೆ ಮಾತನಾಡಿದ ಅಗರ್ವಾಲ್​, ಏಪ್ರಿಲ್​ 20ರಿಂದ ಅನಿರ್ಬಂಧಿತ ಅಥವಾ ನಾನ್​ ಹಾಟ್​ಸ್ಪಾಟ್​ಗಳಲ್ಲಿ ಕೆಲವು ಸೇವೆಗಳಲ್ಲಿ ವಿನಾಯಿತಿ ನೀಡಲಾಗುತ್ತದೆ. ಆದರೆ, ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ವಿನಾಯಿತಿ ಇಲ್ಲದೇ ಕಟ್ಟುನಿಟ್ಟಿನ ಕ್ರಮದೊಂದಿಗೆ ಲಾಕ್​ಡೌನ್ ಮೇ 3ರವರೆಗೆ ಮುಂದುವರಿಯಲಿದೆ ಎಂದರು. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net