ಲಾಕ್​ಡೌನ್​ ಆದೇಶ ಪಾಲಿಸಿ ಎಂದ್ರೂ ಕೇಳದ ಜನ; ಕಟ್ಟಡದ ಟೆರೇಸ್​ ಮೇಲೆ ನಮಾಜ್​ ಮಾಡುತ್ತಿದ್ದ 35 ಮಂದಿ ವಿರುದ್ಧ ಎಫ್​ಐಆರ್

POLICE-FIR
Published on

ಪುಣೆ: ಕರೊನಾ ನಿಯಂತ್ರಣಕ್ಕೆ ಲಾಕ್​ಡೌನ್​ ವಿಧಿಸಲಾಗಿದೆ. ಯಾರೂ ಗುಂಪುಗೂಡಬೇಡಿ ಎಂದು ಪದೇಪದೆ ಆರೋಗ್ಯ ತಜ್ಞರು, ಕೇಂದ್ರ, ರಾಜ್ಯಸರ್ಕಾರಗಳು ಸೂಚನೆ ನೀಡುತ್ತಿವೆ. ಆದರೆ ಎಷ್ಟೇ ತಿಳಿಸಿ ಹೇಳಿದರೂ ಕೆಲವರಿಗೆ ತಲೆಗೆ ಹೋಗುತ್ತಿಲ್ಲ. ತಮ್ಮ ದೈನಂದಿನ ಅಗತ್ಯಗಳು, ದಿನಚರಿಗಳೇ ಮುಖ್ಯ ಅಂತಿದ್ದಾರೆ.

ಅದಕ್ಕೆ ಸಾಕ್ಷಿಯಂತೆ ಪುಣೆಯಲ್ಲಿ ಒಂದು ಘಟನೆ ನಡೆದಿದೆ. ಕರೊನಾ ವೈರಸ್​ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡವೊಂದರ ಟೆರೇಸ್​ ಮೇಲೆ ಗುಂಪಾಗಿ ನಮಾಜ್​ (ಪ್ರಾರ್ಥನೆ) ಮಾಡುತ್ತಿದ್ದ 35 ಮಂದಿ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ. ಅದರಲ್ಲಿ 13 ಮಂದಿಯನ್ನು ಬಂಧಿಸಿ, ನಂತರ ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.

ಇವರೆಲ್ಲ ಕುಡಲ್ವಾಡಿ ಏರಿಯಾದ ನಿವಾಸಿಗಳು. ಮಾ.27ರಂದು ಕಟ್ಟಡದ ಟೆರೇಸ್​ ಮೇಲೆ ಗುಂಪುಗೂಡಿ ನಮಾಜ್​ ಮಾಡುತ್ತಿದ್ದರು. ನಮಗೆ ಮಾಹಿತಿ ಸಿಕ್ಕ ತಕ್ಷಣೆ ತನಿಖೆ ನಡೆಸಿದ್ದೇವೆ. 35 ಮಂದಿ ವಿರುದ್ಧವೂ ಎಫ್​ಐಆರ್​ ದಾಖಲಿಸಲಾಗಿತ್ತು. ಅವರಲ್ಲಿ 13 ಮಂದಿಯನ್ನು ಬಂಧಿಸಿದ್ದೆವು. ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಕರೊನಾ ವೈರಸ್​ ಪ್ರಕರಣಗಳು ಕಂಡುಬಂದಿದ್ದು ಮಹಾರಾಷ್ಟ್ರದಲ್ಲಿ. ಮುಂಬೈ, ಕಾನ್ಪುರ ಎಲ್ಲ ಸೇರಿ ಇಲ್ಲಿಯವರೆಗೆ 8 ಮಂದಿ ಕರೊನಾದಿಂದ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net