

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ೧೩ ಅಪಘಾತ ಮತ್ತು ೨ ಸಾವುಗಳು ಸಂಭವಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹೌದು, ನಗರ ಸಂಚಾರ ಪೊಲೀಸರ ಅಂಕಿ-ಅಂಶಗಳ ಪ್ರಕಾರ ಪ್ರತಿ ದಿನ ಸರಾಸರಿ ೧೩ ಅಪಘಾತಗಳು ಮತ್ತು ಎರಡು ಸಾವುಗಳು ಸಂಭವಿಸುತ್ತಿವೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಸಂಚಾರ ಪೊಲೀಸರು ನಗರದೊಳಗೆ ವಿಶೇಷವಾಗಿ ಅಪಘಾತಗಳಿಗೆ ಗುರಿಯಾಗುತ್ತಿರುವ ೫೯ ಅಪಘಾತದ ಹಾಟ್‌ಸ್ಪಾರ್ಟ್ ಸ್ಥಳಗಳನ್ನು ಗುರುತಿಸಿದ್ದಾರೆ.
೨೦೨೩ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ, ನಗರದಲ್ಲಿ ೩,೭೦೬ ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಯಾಗಿವೆ. ಅಪಘಾತಗಳಿಂದ ೬೫೧ ಮಂದಿ ಮೃತಪಟ್ಟಿದ್ದರೆ, ೩,೧೫೫ ಮಂದಿ ಗಾಯಗೊಂಡಿದ್ದಾರೆ.
ತುಮಕೂರು ರಸ್ತೆ, ಪೀಣ್ಯ ಬಳಿ, ಯಶವಂತಪುರ ಮತ್ತು ಜಾಲಹಳ್ಳಿಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ಅದೇ ರೀತಿ, ಉತ್ತರ ವಿಭಾಗದ ಬೆಂಗಳೂರು ವಿಮಾನ ನಿಲ್ದಾಣದ ಮೇಲ್ಸೇತುವೆಯ ಸುತ್ತಮುತ್ತಲಿನ ಪ್ರದೇಶವು ಅಪಘಾತದ ಹಾಟ್‌ಸ್ಪಾಟ್ ಆಗಿದೆ. ಕೆ.ಆರ್.ಪುರ, ವೈಟ್‌ಫೀಲ್ಡ್, ದೇವನಹಳ್ಳಿ, ಕಾಮಾಕ್ಷಿಪಾಳ್ಯ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಹೊರ ವರ್ತುಲ ರಸ್ತೆಗಳಲ್ಲಿ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ.
ಈ ರೀತಿ ಗುರುತಿಸಲಾದ ಬ್ಲಾಕ್ ಸ್ಪಾಟ್‌ಗಳು ನಗರದ ವಿವಿಧ ಪೊಲೀಸ್ ಠಾಣೆ ಮತ್ತು ಟ್ರಾಫಿಕ್ ಪೊಲೀಸ್ ವಿಭಾಗಗಳನ್ನು ವ್ಯಾಪಿಸಿವೆ. ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು, ರಿಂಗ್ ರಸ್ತೆಗಳು ಮತ್ತು ಇತರ ನಗರ ರಸ್ತೆಗಳು ಎಂದು ವರ್ಗೀಕರಿಸಲಾಗಿದೆ.
ನೈಸ್ ರಸ್ತೆಯಲ್ಲಿನ ಅಪಘಾತದ ಸ್ಪಾಟ್‌ಗಳನ್ನು ಗುರುತಿಸಿ ಕೆಲವೊಂದು ಸುಧಾರಣೆಗಳನ್ನು ಕೈಗೊಂಡ ಪರಿಣಾಮ ಇದೀಗ ಅಪಘಾತಗಳ ಪ್ರಮಾಣದಲ್ಲಿ ತಗ್ಗಿದೆ.
ನಗರ ಸಂಚಾರ ಪೊಲೀಸರು ಇತ್ತೀಚೆಗೆ ನೈಸ್ ರಸ್ತೆಯಲ್ಲಿ ರೂಪಾಂತರಗೊಂಡ ಅಪಘಾತ ಬ್ಲಾಕ್‌ಸ್ಪಾಟ್‌ಗಳಲ್ಲಿ ಒಂದನ್ನು ಉದ್ಘಾಟಿಸಿದರು. ನೈಸ್ ರಸ್ತೆಯಲ್ಲಿ ಪ್ರಮುಖವಾಗಿ ೧.೫-ಕಿಲೋಮೀಟರ್ ಅಂತರದಲ್ಲಿ ವೇಗದ ವಾಹನಗಳ ನಡುವೆ ಆಗಾಗ್ಗೆ ಅಪಘಾತಗಳನ್ನು ನಡೆಯುತ್ತಿತ್ತು. ಇದೀಗ ಅಪಘಾತಗಳು ಕಡಿಮೆಯಾಗಿದೆ. ಅದಕ್ಕೆ ಕಾರಣ ಆ ರಸ್ತೆಯನ್ನು ರೂಪಾಂತರ ಮಾಡಿರುವುದು. ಈ ರಸ್ತೆಯ ಎತ್ತರವನ್ನು ನಾಲ್ಕು ಮೀಟರ್‌ಗಳಷ್ಟು ಹೆಚ್ಚಿಸಲಾಯಿತು. ಜತೆಗೆ ಅಲ್ಲಿ ಬೀಮ್ ಗಾರ್ಡ್‌ಗಳು, ಹೈ-ಮಾಸ್ತ್ ಲೈಟ್‌ಗಳು, ಸಿಸಿ ಕ್ಯಾಮೆರಾಗಳು, ಸ್ಪೀಡೋಮೀಟರ್ ಮತ್ತು ಸೋಲಾರ್ ಲೈಟ್‌ಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ:
ಈ ಸಮಸ್ಯೆಯನ್ನು ನಿಭಾಯಿಸಲು, ಅಕೋ ಝೋನ್ ಸೈನ್‌ಬೋರ್ಡ್‌ಗಳ ಅಳವಡಿಕೆ, ಸ್ಕೈವಾಕ್‌ಗಳ ನಿರ್ಮಾಣ, ಕ್ಯಾಟ್ ಐಸ್ ಮತ್ತು ಬ್ಲಿಂಕರ್‌ಗಳ ಅಳವಡಿಕೆ, ಸಿಸಿ ಕ್ಯಾಮೆರಾಗಳು ಮತ್ತು ರೇಸ್ಡ್ ಸೆಂಟರ್ ಮೀಡಿಯನ್‌ಗಳು ಸೇರಿ ಹಲವಾರು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಗುರುತಿಸಲಾದ ಬ್ಲಾಕ್‌ಸ್ಪಾಟ್‌ಗಳಲ್ಲಿ ಅಪಘಾತಗಳನ್ನು ತಗ್ಗಿಸುವ ಕ್ರಮಗಳ ಕುರಿತು ಪೊಲೀಸರು ಸಮಗ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಿನ ಮುಖ್ಯ ಗುರಿ ಎಂದರೆ ನಾಗರಿಕ ಏಜೆನ್ಸಿಗಳ ಸಹಯೋಗದೊಂದಿಗೆ ರಸ್ತೆಗಳನ್ನು ಪುನರ್‌ರಚಿಸುವುದು ಮತ್ತು ಬದಲಾವಣೆಗಳನ್ನು ಜಾರಿಗೆ ತರುವುದರಿಂದ ಅಪಘಾತಗಳನ್ನು ತಡೆಯಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.