

ಬೆಂಗಳೂರು: ಹೆಸರಾಂತ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ದೇಶಿಸಿದ ‘12 ಫೇಲ್’ ಸಿನಿಮಾ ಕಳೆದ ಅ.27ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಮೊದಲ ವಾರಗಳಲ್ಲಿ ಅಷ್ಟು ಸದ್ದು ಮಾಡದ ಚಿತ್ರ, ತದನಂತರದಲ್ಲಿ ಸದ್ದಿಲ್ಲದಂತೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿತು. ಚಿತ್ರರಸಿಕರಿಂದ ಉತ್ತಮ ವಿಮರ್ಶೆ ಮತ್ತು ಪ್ರಶಂಸೆ ಪಡೆದ ಫಿಲಂ ಇಂದು ಥಿಯೇಟರ್ಗಳಲ್ಲಿ 100 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ಸಂಭ್ರಮಿಸಿದ ಚಿತ್ರತಂಡ, ಶತದಿನೋತ್ಸವ ದಿನದಂದು ಟಿಕೆಟ್ ದರವನ್ನು 100 ರೂ. ಮಾಡಿ ವಿಶೇಷವಾಗಿ ಆಚರಿಸಿದೆ.
ಇದನ್ನೂ ಓದಿ: ಶಾಲಾ ವಠಾರದಲ್ಲೇ ಕಲಿಕೋಪಕರಣ
ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ '12 ಫೇಲ್', ಒಟಿಟಿ ಪ್ರವೇಶಿಸಿದ ಬಳಿಕವೂ ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ. ಇದು ಅನೇಕ ಸಿನಿಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದು, ಈ ಚಿತ್ರ ಒಟಿಟಿಗೆ ಬಂದರೂ ಕೂಡ ಥಿಯೇಟರ್ಗಳಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿರುವುದು ಆಶ್ಚರ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ. ಈಗಾಗಲೇ ವಿಶ್ವ ಮಟ್ಟ ತಲುಪಿರುವ ಈ ಚಿತ್ರವನ್ನು 2024ರ ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿ ನಾಮನಿರ್ದೇಶನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ವಿಷಯನ್ನು ಚಿತ್ರದ ನಾಯಕ ವಿಕ್ರಾಂತ್ ಮಾಸ್ಸೆ ಸಹ ಇತ್ತೀಚೆಗಷ್ಟೆ ಹಂಚಿಕೊಂಡಿದ್ದರು.
ಈ ಚಿತ್ರದ ಮೂಲಕ ಯುಪಿಎಸ್ಸಿ ಪರೀಕ್ಷಾ ಆಕಾಂಕ್ಷಿಗಳ ಮನಗೆದ್ದ ನಟ ವಿಕ್ರಾಂತ್ ಮಾಸ್ಸೆ ಇಂದು ಅಪಾರ ಜನಮನ್ನಣೆ ಸ್ವೀಕರಿಸಿ ತಮ್ಮ ಸ್ಟಾರ್ ಪಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಐಪಿಎಸ್ ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ಕಾಣಿಸಿಕೊಂಡ ಮಾಸ್ಸೆಗೆ ನಾಯಕಿಯಾಗಿ ಮೇಧಾ ಶಂಕರ್ ಸಾಥ್ ನೀಡಿದರು. ತೆರೆ ಮೇಲೆ ಅದ್ಭುತವಾಗಿ ಮೂಡಿಬಂದ '12 ಫೇಲ್' ಚಿತ್ರ ಇದೀಗ ಅದ್ದೂರಿ ಯಶಸ್ಸನ್ನು ದಾಖಲಿಸಿದ್ದು, 100 ದಿನಗಳ ಸಂಭ್ರಮವನ್ನು ಚಿತ್ರಮಂದಿರದಲ್ಲೇ ಆಚರಿಸಿದೆ.
ಧೈರ್ಯ, ಸಾಂತ್ವನ, ಪ್ರೀತಿ, ಉತ್ಸಾಹ ಇನ್ನು ಅನೇಕ ಭಾವನೆಗಳನ್ನು ಚಿತ್ರದ ಮೂಲಕ ಕಟ್ಟಿಕೊಟ್ಟ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗುತ್ತಿವೆ.