ಶಿವಮೊಗ್ಗ ಕಾಡಿನಲ್ಲಿ 127 ಗಜಗಳು!

elephants
ಸಾಂದರ್ಭಿಕ ಚಿತ್ರ
Published on

ಶಿವಮೊಗ್ಗ: ಪರಿಸರ ಪ್ರವಾಸೋದ್ಯಮದ ಮೂಲಕ ಗಮನಸೆಳೆದಿರುವ ಜಿಲ್ಲೆಯ ವಿಶೇಷತೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಮೂಡಿದೆ. ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯದ ವನ್ಯಜೀವಿ ಪ್ರದೇಶಗಳ ಪೈಕಿ ಶಿವಮೊಗ್ಗ ವನ್ಯಜೀವಿ ವಿಭಾಗಕ್ಕೆ 6ನೇ ಸ್ಥಾನ ಲಭಿಸಿದೆ. ಬನ್ನೇರುಘಟ್ಟ ಉದ್ಯಾನವನದೊಂದಿಗೆ ಶಿವಮೊಗ್ಗ ವಿಭಾಗ ಈ ಸ್ಥಾನ ಹಂಚಿಕೊಂಡಿದೆ.

ಕಳೆದ ವರ್ಷ ನಡೆಸಿದ್ದ ಆನೆ ಗಣತಿ ವರದಿ ಬಹಿರಂಗಗೊಂಡಿದ್ದು, ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ ಒಟ್ಟು 127 ಆನೆಗಳನ್ನು ಗಣಗುರುತಿಸಲಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಮಲೇಶಂಕರ, ಆಯನೂರು, ಮೂಗುಡ್ತಿ ವಲಯದಲ್ಲಿ ಆನೆಗಳ ಸಂಚಾರ ಹೆಚ್ಚಿರುವುದು ದೃಢಪಟ್ಟಿದೆ. ಈ ಗಣತಿಯಲ್ಲಿ ಸಕ್ರೆಬೈಲು ಆನೆಬಿಡಾರದ ಗಜಪಡೆಯನ್ನಾಗಲೀ, ಬೇರೆಡೆ ಸೇರೆ ಹಿಡಿದು ಕ್ರಾಲ್‌ನಲ್ಲಿ ಇರಿಸಲಾಗಿರುವ ಆನೆಗಳನ್ನಾಗಲೀ ಪರಿಗಣಿಸಿಲ್ಲ. ಅಭಯಾರಣ್ಯದಲ್ಲಿ ನೇರವಾಗಿ ಕಂಡು ಬಂದ ಹಾಗೂ ಬೇರೆ ಅಂಶಗಳನ್ನು ಪರಿಗಣಿಸಿ 127 ಎಂಬ ಸಂಖ್ಯೆಯನ್ನು ನಮೂದಿಸಲಾಗಿದೆ.
ವಿವಿಧ ಅಂಶಗಳನ್ನು ಆಧರಿಸಿ ಆನೆಗಳ ಗಣತಿ ನಡೆಸಲಾಗಿದೆ. ನೇರವಾಗಿ ಕಣ್ಣಿಗೆ ಕಂಡ ಆನೆಗಳ ಜತೆಗೆ, ಆನೆಗಳು ಮುರಿದರಬಹುದಾದ ಮರಗಳು, ಕಂಡು ಬಂದ ಹೆಜ್ಜೆ ಗುರುತುಗಳು, ಲದ್ದಿ ಮುಂತಾದವನ್ನು ಪರಿಗಣಿಸಿ 127 ಆನೆಗಳಿವೆ ಎಂದು ವರದಿ ಮಾಡಲಾಗಿದೆ. ಶಿವಮೊಗ್ಗ ವನ್ಯಜೀವಿ ವಿಭಾಗ ಆನೆಗಳ ಕಾರಿಡಾರ್‌ನೊಂದಿಗೆ ಸಂಪರ್ಕ ಹೊಂದಿದೆ.

ವಿಶಾಲವಾದ ಅರಣ್ಯ ಸಂಪರ್ಕವೂ ಇದೆ. ಈ ಕಾರಣದಿಂದ ಆನೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವ ಸಂದರ್ಭದಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ ಹಾದು ಹೋಗುತ್ತವೆ. ತುಂಗಾ ಜಲಾಶಯದಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತದೆ. ಹಿನ್ನೀರು ಪ್ರಮಾಣ ಕುಸಿಯುತ್ತದೆ. ಈ ವೇಳೆ ಆನೆಗಳು ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಸರಾಗವಾಗಿ ಸಂಚರಿಸುತ್ತವೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಿಂದ ಬರುವ ಆನೆಗಳು ಶೆಟ್ಟಿಹಳ್ಳಿ ಅಭಯಾರಣ್ಯ, ಮೂಕಾಂಬಿಕಾ ಅಭಯಾರಣ್ಯ, ಕುದರೆಮುಖ ಹಾಗೂ ಹೆಬ್ರಿ ವಲಯದ ಮೂಲಕ ನೇರವಾಗಿ ಪಶ್ಚಿಮಘಟ್ಟದ ದಟ್ಟ ಅರಣ್ಯ ಪ್ರವೇಶಿಸುತ್ತವೆ. ಹೀಗೆ ಸಂಚರಿಸಿದ ಆನೆಗಳನ್ನು ಗಣತಿ ವೇಳೆ ಪರಿಗಣಿಸಲಾಗುತ್ತದೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ತಿಳಿಸಿದ್ದಾರೆ.
ಸಂಘರ್ಷ ವಿರಳ:ಇಷ್ಟೊಂದು ಪ್ರಮಾಣದಲ್ಲಿ ಕಾಡಾನೆಗಳ ಸಂಚಾರವಿದ್ದರೂ ಅವು ವಸತಿ ಪ್ರದೇಶಗಳನ್ನು ಪ್ರವೇಶಿಸಿದ್ದು, ಮನುಷ್ಯರ ಮೇಲೆ ಹಲ್ಲೆ ನಡೆಸಿದ ಸಂದರ್ಭ ತೀರಾ ಅಪರೂಪ. ಕೆಲವು ವರ್ಷಗಳಿಂದ ಆಗುಂಬೆಯಲ್ಲಿ, ಕಳೆದ ವರ್ಷ ಮಂಡಗದ್ದೆ, ಮುಗುಡ್ತಿ ಭಾಗದಲ್ಲಿ ಬೆಳೆ ಹಾಳುಗೆಡವಿದ್ದು ಬಿಟ್ಟರೆ ನಿರಂತರವಾಗಿ ಗಜಪಡೆ ಮನುಷ್ಯರೊಂದಿಗೆ ಸಂಘರ್ಷಕ್ಕೆ ಇಳಿದಿಲ್ಲ. ದಟ್ಟ ಅರಣ್ಯದಲ್ಲಿ ಅದಕ್ಕೆ ಹೇರಳವಾಗಿ ಆಹಾರ ಸಿಗುವುದೂ ಸಂಘರ್ಷ ನಡೆಯದಿರಲು ಪ್ರಮುಖ ಕಾರಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net