124 ಕಾಮಗಾರಿಗೆ ಸರ್ಕಾರದಿಂದಲೇ ತಡೆ

madb office
ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ ಎಂಎಡಿಬಿ ಕಟ್ಟಡ.
Published on

ನವೀನ್ ಬಿಲ್ಗುಣಿ ಶಿವಮೊಗ್ಗ
ಕಳೆದೊಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಆಗದೇ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಹೊಸ ಯೋಜನೆಗಳ ಘೋಷಣೆ ಇರಲಿ, ಕಳೆದ ಸಾಲಿನಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೇ ಅನುದಾನ ಬಿಡುಗಡೆ ಆಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಎಂಎಡಿಬಿ(ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ) ವ್ಯಾಪ್ತಿಯಲ್ಲಿ ಕಳೆದ ಸಾಲಿನ 9 ಕೋಟಿ ರೂ. ವೆಚ್ಚದ 124 ಕಾಮಗಾರಿಗಳನ್ನು ಸರ್ಕಾರವೇ ತಡೆಹಿಡಿದಿದೆ.

ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿಗಾಗಿ ರಚನೆಗೊಂಡಿರುವ ಎಂಎಡಿಬಿ ವ್ಯಾಪ್ತಿಯಲ್ಲಿ 13 ಜಿಲ್ಲಾ ವ್ಯಾಪ್ತಿಯ 74 ತಾಲೂಕು, 12 ಲೋಕಸಭಾ ಕ್ಷೇತ್ರ, 65 ವಿಧಾನಸಭಾ, 21 ವಿಧಾನ ಪರಿಷತ್ ಕ್ಷೇತ್ರಗಳಿವೆ. ಬೆಳಗಾವಿಯಿಂದ ಕೊಡಗಿನವರೆಗೂ ತನ್ನ ವ್ಯಾಪ್ತಿ ಹೊಂದಿದ್ದು 2023-24ನೇ ಸಾಲಿನಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ಕಳೆದೊಂದು ವರ್ಷದಿಂದ 124 ಕಾಮಗಾರಿಗಳು ಇನ್ನೂ ಆರಂಭವೇ ಆಗಿಲ್ಲ.
ಶಾಸಕರು, ವಿಧಾನ ಪರಿಷತ್ ಸದಸ್ಯರ ಕ್ಷೇತ್ರಗಳಿಗೆ 2023-24ನೇ ಸಾಲಿನಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗದಿರುವುದು ಆಡಳಿತ ಪಕ್ಷದವರೂ ಒಳಗೊಂಡಂತೆ ಸರ್ವಪಕ್ಷಗಳ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ರಾಜ್ಯ ಸರ್ಕಾರ ಕಳೆದ ಸಾಲಿನ ಕಾಮಗಾರಿಗಳನ್ನೇ ಪ್ರಸಕ್ತ ವರ್ಷಕ್ಕೆ ಸೇರ್ಪಡೆ ಮಾಡುವಂತೆ ಆದೇಶ ಹೊರಡಿಸಿದ್ದು ಎಲ್ಲ ಶಾಸಕರು, ಎಂಎಲ್‌ಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಒಂದು ವರ್ಷ ಯಾವುದೇ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಅಲ್ಲದೇ ಈಗಾಗಲೆ ಕೆಲ ಕಾಮಗಾರಿಗಳನ್ನು ಎಂಎಡಿಬಿ ಅನುದಾನದಲ್ಲಿ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದು ಕ್ಷೇತ್ರದಲ್ಲಿ ಜನರಿಗೆ ಉತ್ತರ ಕೊಡುವುದು ಜನಪ್ರತಿನಿಧಿಗಳಿಗೆ ಕಷ್ಟವಾಗಲಿದೆ.
ಎಲ್ಲೆಲ್ಲಿ, ಎಷ್ಟು ಕಾಮಗಾರಿ ಬಾಕಿ?:
ಬೆಳಗಾವಿ ಜಿಲ್ಲೆಯ ಬೈಲಹೊಂಗಲ 5, ಬೆಳಗಾವಿ ದಕ್ಷಿಣ 2, ಕಿತ್ತೂರು, ಸವದತ್ತಿ ಮತ್ತು ಯಮಕನಮರಡಿ, ಧಾರವಾಡ ಜಿಲ್ಲೆ ಕಲಘಟಗಿಯ ತಲಾ 1, ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ದಾವಣಗೆರೆ ಜಿಲ್ಲೆ ಹೊನ್ನಾಳಿ, ಮಾಯಕೊಂಡದಲ್ಲಿ ತಲಾ 2, ಹಾಸನ ಜಿಲ್ಲೆಯ ಅರಕಲಗೋಡು 7, ಬೇಲೂರು, ಸಕಲೇಶಪುರ ತಲಾ 6, ಹೊಳೆನರಸೀಪುರ 1, ಹಾವೇರಿ ಜಿಲ್ಲೆಯ ಶಿಗ್ಗಾಂವಿ 3, ಹಾವೇರಿ 2, ಕೊಡಗು ಜಿಲ್ಲೆಯ ಮಡಿಕೇರಿ 3, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ 6, ಬಂಟ್ವಾಳ 4, ಮಂಗಳೂರು ಉತ್ತರ 2, ಶಿವಮೊಗ್ಗ ಜಿಲ್ಲೆಯ ಸೊರಬ 20(ಹೆಚ್ಚುವರಿ ಕಾಮಗಾರಿಗಳು), ಭದ್ರಾವತಿಯ 2, ಶಿಕಾರಿಪುರ, ತೀರ್ಥಹಳ್ಳಿಯ ತಲಾ 1, ಉಡುಪಿ ಜಿಲ್ಲೆಯ ಕಾಪು 3, ಉಡುಪಿ 1, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ 2, ಕಾರವಾರ 1 ಕ್ಷೇತ್ರದ 7.05 ಕೋಟಿ ರೂ. ಹಾಗೂ 11 ವಿಧಾನ ಪರಿಷತ್ ಕ್ಷೇತ್ರಗಳ 1.80 ಕೋಟಿ ರೂ. ವೆಚ್ಚದ 30 ಕಾಮಗಾರಿಗಳಿಗೆ ಸರ್ಕಾರ ತಡೆ ನೀಡಿದೆ.

ಅನುದಾನ ಒಕೆ, ಸಭೆ ಏಕೆ?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಎಂಎಡಿಬಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿ ಐದಾರು ತಿಂಗಳು ಕಳೆದಿದೆ. ಆದರೂ ಎರಡು ವರ್ಷದ ಬಳಿಕ ಇತ್ತೀಚೆಗೆ ಎಂಎಡಿಬಿಯಲ್ಲಿ ಕೋರಂ ಇಲ್ಲದೆ ಇದ್ದರೂ ಸಾಮಾನ್ಯ ಸಭೆ ನಡೆಯಿತು. ಕೆಲವೊಂದು ವಿಷಯಗಳ ಅಂಗೀಕಾರವೂ ಆಯಿತು. ವಿಷರ್ಯಾಸವೆಂದರೆ ಬಹಳಷ್ಟು ಸದಸ್ಯರಿಗೆ ಅನುದಾನ ಮಾತ್ರ ಬೇಕು. ಸಾಮಾನ್ಯ ಸಭೆಗಳು ನಾಮ್ ಕೇ ವಾಸ್ತೆ ಎಂಬಂತಾಗಿವೆ. ಹಾಗಾಗಿ ಪ್ರತಿ ಬಾರಿ ಎಂಎಡಿಬಿ ಸಾಮಾನ್ಯ ಸಭೆಗೆ ಹಾಜರಾಗುವವರ ಜನಪ್ರತಿನಿಧಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಇರುತ್ತದೆ.

ಜಿಲ್ಲೆ-ಬಾಕಿ ಕಾಮಗಾರಿ-ಅನುದಾನ(ಲಕ್ಷ ರೂ.)
ಶಿವಮೊಗ್ಗ-24-220
ಹಾಸನ-20-100
ದಕ್ಷಿಣ ಕನ್ನಡ-12-100
ಬೆಳಗಾವಿ-10-70
ಚಿಕ್ಕಮಗಳೂರು-4-45
ದಾವಣಗೆರೆ-4-40
ಉಡುಪಿ-4-40
ಹಾವೇರಿ-5-35
ಕೊಡಗು-3-35
ಉತ್ತರ ಕನ್ನಡ-3-15
ಧಾರವಾಡ-1-5

ಕಳೆದ ಸಾಲಿನ ಕಾಮಗಾರಿಗಳನ್ನು ಸರ್ಕಾರ ರದ್ದು ಮಾಡಿಲ್ಲ. ಅನುದಾನವನ್ನು ತಡೆಹಿಡಿದಿದೆ. ಮಂಜೂರಾಗಿದ್ದ ಎಲ್ಲ 124 ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2024-25ನೇ ಸಾಲಿಗೆ 33ಕೋಟಿ ರೂ. ಅನುದಾನ ನಿಗದಿಯಾಗಿದ್ದು ಕ್ರಿಯಾಯೋಜನೆ ನೀಡಲಾಗಿದೆ.- ಹನುಮನಾಯ್ಕ, ಎಂಎಡಿಬಿ ಸಹ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net