

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಕರೊನಾ ವೈರಸ್ ರೂಪಾಂತರ ಪತ್ತೆಯಾಗಿರುವ ಈ ಸಂದರ್ಭದಲ್ಲಿ ಕರೊನಾ ಲಸಿಕಾಕರಣದ ಮಹತ್ವ ಇನ್ನೂ ಹೆಚ್ಚಿದೆ. ಹೀಗಿರುವಾಗ ಭಾರತದಲ್ಲಿ ಲಸಿಕಾ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಸರ್ಕಾರದ ಮೈಗವ್ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಇಂದು ಮಾಹಿತಿ ನೀಡಲಾಗಿದ್ದು, "121 ಕೋಟಿ ಭಾರತೀಯರಿಗೆ ಈವರೆಗೆ ಕರೊನಾ ಲಸಿಕೆ ನೀಡಲಾಗಿದೆ. ಆದರೆ, ಕೋವಿಡ್ 19 ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಭಾರತವನ್ನು ಸುರಕ್ಷಿತವಾಗಿಸಲು ಪ್ರಯತ್ನಿಸೋಣ" ಎಂದು ಬರೆಯಲಾಗಿದೆ.
ಶನಿವಾರ(ನ.27) ಬೆಳಿಗ್ಗೆ 8 ಗಂಟೆಯ ಕೋವಿನ್ ಪೋರ್ಟಲ್ ಮಾಹಿತಿಯ ಪ್ರಕಾರ, ಈವರೆಗೆ ದೇಶದಲ್ಲಿ 1,21,06,58,262 ಡೋಸ್ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 73,58,017 ಡೋಸ್ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ನೀಡಲಾಗುತ್ತಿದ್ದು, ಇನ್ನೂ ಮಕ್ಕಳಿಗೆ ಲಸಿಕಾ ಅಭಿಯಾನ ಆರಂಭಿಸಲಾಗಿಲ್ಲ.