

ಕರೊನಾ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿ ಬುಧವಾರ ರಾತ್ರಿಯಿಂದ ಮತ್ತೆ ಲಾಕ್ಡೌನ್ ವಿಧಿಸಲಾಗಿದೆ. ಪಟ್ಟಣ ತೊರೆಯಲು ಹಾಗೂ ಮನೆಗೆ ಬರಲು ಜನರು ದೌಡಾಯಿಸಿದ್ದರಿಂದ ರಾಜಧಾನಿ ಲಂಡನ್ನಲ್ಲಿ ಸಾವಿರಾರು ಕಡೆ ಟ್ರಾಫಿಕ್ ಜಾಮ್ ಉಂಟಾಯಿತು.
ಲಂಡನ್ ಒಂದರಲ್ಲೇ 2,624 ಟ್ರಾಫಿಕ್ ಜಾಮ್ ಉಂಟಾಗಿ ಒಟ್ಟು 1,205 ಮೈಲಿಯಷ್ಟು ಉದ್ದ ವಾಹನ ದಟ್ಟಣೆ ಉಂಟಾಯಿತು. ಮುಂದಿನ ನಾಲ್ಕು ವಾರಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಇರಲಿದೆ. ಡಿಸೆಂಬರ್ 2ರಂದು ಲಾಕ್ಡೌನ್ ಮುಗಿಯಲಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಪ್ರಕಟಿಸಿದ್ದಾರೆ.
ಮತ್ತೆ 50 ಸಾವಿರ ದಾಟಿದ ಪ್ರಕರಣ: ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಕರೊನಾ ಸೋಂಕು ಇದೀಗ ಮತ್ತೊಮ್ಮೆ ಏರಿಕೆ ಕಾಣುತ್ತಿದೆ. ಬುಧವಾರ ದೇಶದಲ್ಲಿ 50,200ಕ್ಕೂ ಅಧಿಕ ಜನರಲ್ಲಿ ಸೋಂಕು ದೃಢವಾಗಿದೆ. ಅಕ್ಟೋಬರ್ 25ರ ನಂತರ ಇದೇ ಮೊದಲನೇ ಬಾರಿಗೆ ಏಕದಿನ ಪ್ರಕರಣದ ಸಂಖ್ಯೆ 50 ಸಾವಿರಕ್ಕೂ ಹೆಚ್ಚು ವರದಿಯಾಗಿದೆ. 83.64 ಲಕ್ಷ ಸೋಂಕಿತರಲ್ಲಿ 77.11 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. 5.26 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಗುಣಮುಖ ಪ್ರಮಾಣ ಶೇ. 92.2ಕ್ಕೆ ಏರಿಕೆಯಾಗಿದೆ.