ಶೂನ್ಯ ಬಡ್ಡಿಗೆ 1,200 ಕೋಟಿ ರೂ. ಸಾಲ ವಿತರಣೆ ಗುರಿ

r m manjunatha gowda
manjunatha gowda
Published on

ಶಿವಮೊಗ್ಗ: ಡಿಸಿಸಿ (ಜಿಲ್ಲಾ ಸಹಕಾರ ಕೇಂದ್ರ) ಬ್ಯಾಂಕ್ 2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ರೂ. ಲಾಭ ಗಳಿಸಿದ್ದು, ಇದರಲ್ಲಿ 10.58 ಕೋಟಿ ರೂ. ನಿವ್ವಳ ಲಾಭವಾಗಿದೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ 25 ಕೋಟಿ ರೂ. ನಿವ್ವಳ ಲಾಭ ಗಳಿಸುವ ಗುರಿಯಿದೆ ಎಂದು ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

2023-24ರಲ್ಲಿ 138.98 ಕೋಟಿ ರೂ. ಷೇರು ಬಂಡವಾಳ, 67.46 ಕೋಟಿ ರೂ. ನಿಧಿಗಳು, 2332.29 ಕೋಟಿ ರೂ. ದುಡಿಯುವ ಬಂಡವಾಳ ಸಂಗ್ರಹವಾಗಿದೆ. 1462.78 ಕೋಟಿ ರೂ. ಠೇವಣಿ ಹೊಂದಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಪ್ರಗತಿಯನ್ನು ವಿವರಿಸಿದರು.
2024-25ನೇ ಸಾಲಿನಲ್ಲಿ ಶೂನ್ಯ ಬಡ್ಡಿದರದಲ್ಲಿ 1.20 ಲಕ್ಷ ರೈತರಿಗೆ 1,200 ಕೋಟಿ ರೂ. ಅಲ್ಪಾವಧಿ ಕೃಷಿ ಬೆಳೆ ಸಾಲ ನೀಡಲಾಗುವುದು. ಶೇ.3ರ ಬಡ್ಡಿದರದಲ್ಲಿ 1,500 ರೈತರಿಗೆ 80 ಕೋಟಿ ರೂ. ಮಧ್ಯಮಾವಧಿ ಕೃಷಿ ಸಾಲ ನೀಡಲು ಯೋಜನೆ ಸಿದ್ಧವಾಗಿದೆ. 2,100 ಸ್ವಸಹಾಯ ಸಂಘಗಳಿಗೆ 100 ಕೋಟಿ ರೂ. ಸಾಲ ವಿತರಿಸುವ, ಠೇವಣಿ ಸಂಗ್ರಹವನ್ನು 1,600 ಕೋಟಿ ರೂ.ಗೆ ಏರಿಕೆ ಮಾಡುವ ಗುರಿಯಿದೆ ಎಂದು ಹೇಳಿದರು.
ಸಹಕಾರ ವಲಯಕ್ಕೆ ಜಿಎಸ್‌ಟಿ ಅನ್ವಯಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಜುನಾಥ ಗೌಡ, ಸಹಕಾರ ಸಂಘಗಳಲ್ಲಿ ನಿಶ್ಚಿತ ಠೇವಣಿ ಇರಿಸುವ ವೈಯಕ್ತಿಕ ಅಥವಾ ಸಂಘ ಸಂಸ್ಥೆಗಳಿಗೆ ಜಿಎಸ್‌ಟಿ ಅನ್ವಯಿಸುವುದು ಕಷ್ಟಕರ. ಸಹಕಾರ ತತ್ವಕ್ಕೆ ಜಿಎಸ್‌ಟಿ ವಿರೋಧಿ. ಇದು ಬ್ಯಾಂಕ್‌ಗಳ ಪ್ರಗತಿಗೂ ಧಕ್ಕೆಯಾಗಲಿದೆ. ಸಹಕಾರ ಸಂಘಗಳ ವ್ಯವಹಾರಗಳಿಗೆ ಜಿಎಸ್‌ಟಿ ಅನ್ವಯಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಹನುಮಂತು, ಮಹಾಲಿಂಗಯ್ಯ ಶಾಸ್ತ್ರಿ, ಕೆ.ಪಿ.ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ಚಂದ್ರಶೇಖರ ಗೌಡ, ಪರಮೇಶ್, ದಶರಥಗಿರಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಕಲ್ಮನೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net