ಕೆ.ಆರ್.ನಗರ ತಾಲೂಕಿನಲ್ಲಿ 12 ಪರೀಕ್ಷಾ ಕೇಂದ್ರ

21 KRN-4
Published on

ಕೆ.ಆರ್.ನಗರ: ಜೂ.25ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿ ಕೊವಿಡ್-19 ಬಗ್ಗೆ ಏನಾದರೂ ಅನುಮಾನ ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ತಿಳಿಸುವುದು. ಅಂತಹ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಹೇಳಿದರು.

ಪಟ್ಟಣದ ಸಂತ ಜೋಸೆಫರ ಶಾಲೆಯಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಮತ್ತು ಸಿಬ್ಬಂದಿಗೆ ಆಯೋ ಜಿಸಿದ್ದ ತರಬೇತಿ ಸಭೆಯಲ್ಲಿ ಮಾತನಾಡಿದ ಅವರು ಆಯಾಯ ಶಾಲೆಯ ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಮತ್ತು ಕೊಠಡಿಗಳ ಸಂಖ್ಯೆಯನ್ನು ಮೊದಲೇ ತಿಳಿಸತಕ್ಕದ್ದು. ಪರೀಕ್ಷೆಯ ದಿನ ನಿಗದಿತ ಸಮಯಕ್ಕೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವುದರ ಜತೆಗೆ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕೆಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ 12 ಪರೀಕ್ಷಾ ಕೇಂದ್ರಗಳಿದ್ದು ಅವುಗಳಿಗೆ ಮುಖ್ಯ ಅಧೀಕ್ಷಕರು, ಕಸ್ಟಡಿಯನ್‌ಗಳು, ಮೊಬೈಲ್ ಸ್ವಾಧಿನಾಧಿಕಾರಿಗಳು, ಸ್ಕ್ವಾಡ್‌ಗಳ ತಂಡಗಳನ್ನು ಮಾಡಲಾಗಿದೆ. ಅವರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವುದು. ವ್ಯತ್ಯಾಸವಾದಲ್ಲಿ ಸಂಬಂಧಪಟ್ಟ ಅಧಿಕಾರಿಯೇ ಜವಾಬ್ದಾರರಾಗಿರಬೇಕಾಗಿರುತ್ತದೆ ಎಂದರು.

ತಾಲೂಕಿನಲ್ಲಿ ಒಟ್ಟು 3203 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು ಕೊಠಡಿ ಮೇಲ್ವಿಚಾರಕರು ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಡಿ ಗ್ರೂಪ್ ನೌಕರರು, ವಾಟರ್ ಬಾಯ್ಸ, ಮಾರ್ಗಾಧಿಕಾರಿಗಳು ಸೇರಿದಂತೆ ಒಟ್ಟು 599 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಬಿಆರ್‌ಸಿ ರುದ್ರಪ್ಪ, ಪಿಇಒ ಸುಬ್ಬೇಗೌಡ, ಬಿಐಇಆರ್‌ಟಿ ಶಂಕರೇಗೌಡ, ಸಿಆರ್‌ಪಿ ಈಶ್ವರ್, ಇಸಿಒಗಳಾದ ಭರತೇಶ್, ಜಗದೀಶ್, ಚಂದ್ರು, ಯೋಗೇಶ್ವರ್, ಸುಬ್ಬರಾಮ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net