

ಬೆಂಗಳೂರು: ಕೃಷಿ ಜಮೀನಿನ ಕ್ರಯ, ದಾನ, ವಿಭಾಗ, ವಿಲ್ ಇನ್ನಿತರ ವರ್ಗಾವಣೆ ಪತ್ರಗಳ ನೋಂದಣಿ ವೇಳೆ 11ಇ ನಕ್ಷೆಗೆ ವಿನಾಯಿತಿ ನೀಡಿ ನೋಂದಣಿ ನಡೆಸುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಹೊರತಾಗಿಯೂ ಗೊಂದಲ ಮಾತ್ರ ಬಗೆಹರಿಯುತ್ತಿಲ್ಲ. 11ಇ ನಕ್ಷೆ ಇಲ್ಲದೆ ನೋಂದಣಿ ನಡೆಯುವುದಿಲ್ಲ ಎಂದು ಸರ್ಕಾರ ಪಟ್ಟು ಹಿಡಿದಿರುವ ಪರಿಣಾಮ ಈ ನಡೆ ಪ್ರಶ್ನಿಸಿ ಭೂಮಾಲೀಕರು ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗುತ್ತಿದ್ದಾರೆ. ಮತ್ತೊಂದೆಡೆ ಮೇಲ್ಮನವಿ ಅರ್ಜಿ ಪುರಸ್ಕರಿಸಿ ವಿನಾಯಿತಿ ಕೊಟ್ಟಿರುವ ಕೋರ್ಟ್ ಆದೇಶವನ್ನು ಪ್ರಶ್ನಿಸಲು ಕಂದಾಯ ಇಲಾಖೆ ತೀರ್ವನಿಸಿರುವುದು ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ.
ಕಂದಾಯ ಇಲಾಖೆಯಲ್ಲಿ 11ಇ ನಕ್ಷೆ ಸಕಾಲಕ್ಕೆ ಸಿಗುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ 12,901 ಮಂದಿ ಅರ್ಜಿ ಸಲ್ಲಿಸಿದ್ದು, 8153 ಅರ್ಜಿ ಬಾಕಿ ಉಳಿದಿವೆ. ಉಡುಪಿಯಲ್ಲಿ 5,953 ಅರ್ಜಿ ವಿಲೇವಾರಿ ಆಗಬೇಕಿದೆ. ರಾಜ್ಯದ ವಿವಿಧೆಡೆ ಇದೇ ರೀತಿ ಸಾವಿರಾರು ಅರ್ಜಿಗಳಿವೆ. ಆಕಾರ ಬಂದು, ಪಹಣಿಗಳಲ್ಲಿ ವಿಸ್ತೀರ್ಣದಲ್ಲಿ ವ್ಯತ್ಯಾಸ ಇವೆ. ಪಹಣಿ ಕಾಲಂ 3 ಮತ್ತು 9ರಲ್ಲಿ ಉಲ್ಲೇಖಿಸಿರುವ ವಿಸ್ತೀರ್ಣಕ್ಕೆ ಹೊಂದಾಣಿಕೆ ಆಗುವುದಿಲ್ಲ. ವಿಸ್ತೀರ್ಣ ಕಡಿಮೆ ಇದ್ದು, ಮಾಲೀಕನ ಹೆಸರಿನ ಮುಂದೆ ಉಲ್ಲೇಖಿತ ವಿಸ್ತೀರ್ಣ ಹೆಚ್ಚಾಗಿರುತ್ತದೆ. ಪಹಣಿಯಲ್ಲಿ ಈ ವ್ಯತ್ಯಾಸ ತಿದ್ದುಪಡಿ ಮಾಡಬೇಕಿದೆ.
ಪಹಣಿ ತಿದ್ದುಪಡಿಗೆ ಈ ಹಿಂದಿನ ಕಂದಾಯ ದಾಖಲೆಗಳಾದ ಮ್ಯುಟೇಷನ್, ಪಹಣಿ, ಮಂಜೂರಾತಿ ಆದೇಶ ಇಲ್ಲ. ಮಂಜೂರಾತಿ ಮೂಲ ಪ್ರತಿ ಶಿಥಿಲಗೊಂಡಿದೆ. ಅದಕ್ಕಾಗಿ ಪಹಣಿ ತಿದ್ದುಪಡಿ ಅಸಾಧ್ಯ ಎಂದು ಕಂದಾಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ಹಣ ಕೊಟ್ಟವರಿಗೆ ಫೋಡಿ ಮತ್ತು 11ಇ ನಕ್ಷೆ ಸೌಲಭ್ಯ ದೊರೆಯುತ್ತಿದೆ. ಇಲ್ಲವಾದರೆ, ಸರ್ವೆ ಸೌಲಭ್ಯ ಸಿಗದೆ ವರ್ಷಾನುಗಟ್ಟಲೇ ಅರ್ಜಿಗಳು ಬಾಕಿ ಉಳಿಯುತ್ತಿವೆ. ಇದರಿಂದ ನೊಂದು ಹಲವಾರು ಮಂದಿ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ.
ಕರ್ನಾಟಕ ಭೂ ಸುಧಾರಣಾ ಕಾಯ್ದೆ ಪ್ರಕಾರ ಜಮೀನಿನ ಹಕ್ಕು ಬಂದ ಮೇಲೆ ಮ್ಯುಟೇಷನ್ ಹಂತದಲ್ಲಿ 11ಇ ನಕ್ಷೆ ಒದಗಿಸಬೇಕೆಂದು ಉಲ್ಲೇಖಿಸಲಾಗಿದೆ. ಇದರಿಂದ ಕೋರ್ಟ್ನಲ್ಲಿ ಕಂದಾಯ ಇಲಾಖೆಗೆ ಹಿನ್ನಡೆಯಾಗಿ 11ಇ ನಕ್ಷೆ ವಿನಾಯಿತಿ ನೀಡಿ ನೋಂದಣಿ ಮಾಡುವಂತೆ ಆದೇಶ ಹೊರಡಿಸುತ್ತಿವೆ. ಅನೇಕ ಪ್ರಕರಣಗಳಲ್ಲಿ ವಿಭಾಗ ಪತ್ರ ನೋಂದಣಿಗೆ 11ಇ ನಕ್ಷೆ ಅಗತ್ಯ ಇಲ್ಲ, ಸ್ವಾಧೀನದ ಸಮಯದಲ್ಲಿ ಪಡೆಯುವಂತೆ ಆದೇಶಿಸಿದೆ.
ಸಬ್ ರಿಜಿಸ್ಟ್ರಾರ್ ಅಧಿಕಾರಿಗಳು ಕೋರ್ಟ್ ಆದೇಶದಂತೆ ಭೂಮಿ ಮೋಜಿಣಿಯನ್ನು ಬೈಪಾಸ್ ಮಾಡಿ ನೋಂದಣಿ ಮಾಡುತ್ತಿದ್ದಾರೆ. ಇದನ್ನು ತಡೆಯಲು ಕಂದಾಯ ಇಲಾಖೆ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
ಅಧಿಕಾರಿಯೂ ಪಾರ್ಟಿ: 11ಇ ನಕ್ಷೆ ಇಲ್ಲದೆ ನೋಂದಣಿ ಮಾಡದೆ ಇದ್ದಾಗ ಆಸ್ತಿ ವಾರಸುದಾರರು ದಾವೆ ಹೂಡಿ ಸಬ್ ರಿಜಿಸ್ಟ್ರಾರ್ಗಳನ್ನು ಪಾರ್ಟಿ ಮಾಡುತ್ತಿದ್ದರು. 11ಇ ನಕ್ಷೆ ಕೇಳುವ ಅಧಿಕಾರ ಸಬ್ ರಿಜಿಸ್ಟ್ರಾರ್ಗೆ ಇಲ್ಲದ ಕಾರಣ ಕೋರ್ಟ್ನಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುತ್ತಿತ್ತು. ಅದಕ್ಕಾಗಿ ನಕ್ಷೆ ಕೊಡಬೇಕಾದ ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳನ್ನು ಪಾರ್ಟಿ ಮಾಡಲು ಸರ್ಕಾರ ಸೂಚನೆ ನೀಡಿದೆ.
ಅಕ್ರಮಕ್ಕೆ ಯಾವ ಕ್ರಮ?: ಭೂಮಾಪನ ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ, ಲಂಚ ಕೊಟ್ಟು ತಾಂತ್ರಿಕ ಸಮಸ್ಯೆ ಇದ್ದರೂ ಫೋಡಿ ಮತ್ತು 11ಇ ನಕ್ಷೆ ಕೊಟ್ಟಿರುವ ಉದಾಹರಣೆಗಳಿವೆ. ಆದರೆ, ಅದೇ ಸರ್ವೆ ನಂಬರ್ನಲ್ಲಿ ಉಳಿದವರಿಗೆ ನಕ್ಷೆ ಕೊಟ್ಟಿಲ್ಲ. 11ಇ ನಕ್ಷೆ ಇಲ್ಲದೆ ಖಾತಾ ಮಾಡಿರುವ ಅಧಿಕಾರಿಗಳ ವಿರುದ್ಧ ಹಾಗೂ ರೆವಿನ್ಯೂ ಬಡಾವಣೆಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಆದೇಶ ಹಿಂಪಡೆದಿಲ್ಲ: 2012ರಲ್ಲಿ, 11ಇ ನಕ್ಷೆಗೆ ವಿನಾಯಿತಿ ಕೋರಿ ಕೋರ್ಟ್ ಅದೇಶ ಬಂದರೆ ಭೂಮಿ ತಂತ್ರಾಂಶದಲ್ಲಿ ಮಾಲೀಕನ ಹೆಸರು ಮತ್ತು ವಿಸ್ತೀರ್ಣ ಪಡೆದು ಕೋರ್ಟ್ ಆದೇಶ/ಡಿಕ್ರಿ ಪ್ರಕಾರ ಎಂದು ದಸ್ತಾವೇಜು ನೋಂದಾಯಿಸಬಹುದು. ಕೋರ್ಟ್ ಆದೇಶದ ಮೇಲೆ 11ಇ ನಕ್ಷೆ ವಿನಾಯಿತಿ ಕೊಡುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶಿಸಿದೆ. ಆದರೆ, ಈ ಆದೇಶ ಹಿಂಪಡೆಯದೆ ಮತ್ತೊಂದು ಸುತ್ತೋಲೆ ಹೊರಡಿಸಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಕೋರ್ಟ್ನಿಂದ ಇತ್ಯರ್ಥ: ಪೋಡಿ ದುರಸ್ತಿಗೆ ಅನುಮತಿ ಕೋರಿ ಹಲವರು ಕೋರ್ಟ್ ಮೋರೆಹೋಗಿದ್ದು, ಕೋರ್ಟ್ ಆದೇಶದಂತೆ 61 ಮಂದಿ ಪೋಡಿ ದುರಸ್ತಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯ 40 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಅರ್ಜಿಗಳಿವೆ.
ತಿದ್ದುಪಡಿ ತರದೆ ಸುತ್ತೋಲೆ: ಉಪ ನೋಂದಣಾಧಿಕಾರಿಗಳು ನೋಂದಣಿ ನಿಯಮಾವಳಿ 1965 ಮತ್ತು ನೋಂದಣಿ ಕಾಯ್ದೆ ಅನ್ವಯ ಕರ್ತವ್ಯ ನಿರ್ವಹಿಸುತ್ತಾರೆ. 11ಇ ನಕ್ಷೆ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ವರ್ಗಾವಣೆ ಪತ್ರ ನೋಂದಣಿಯಾದ ಮೇಲೆ ಖಾತಾ ಸಮಯದಲ್ಲಿ ಫೋಡಿ ಮತ್ತು 11ಇ ನಕ್ಷೆ ಪರಿಗಣಿಸಬೇಕು ಎನ್ನಲಾಗಿದೆ. ನೋಂದಣಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರದೆ ಬೈಪಾಸ್ ಮಾಡಿ ಆದೇಶ ಮತ್ತು ಸುತ್ತೋಲೆ ಹೊರಡಿಸುತ್ತಿರುವುದರಿಂದ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ.