

ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದ್ದು ಸಾವಿನ ಸಂಖ್ಯೆ 288ಕ್ಕೆ ಏರಿದೆ. 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಮಂದಿ ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರಿನ ನಿವಾಸಿಗಳಾದ 110ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿನಿಂದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಜೈನತೀರ್ಥ ಕ್ಷೇತ್ರವಾದ ಜಾರ್ಖಂಡ್‌ನ ಸಮ್ಮೇದ ಶಿಖರಕ್ಕೆ ತೆರಳಿದ್ದರು.
ಬಾಲಸೋರ್‌ನಲ್ಲಿ ನಡೆದ ಸರಣಿ ಅಪಘಾತದ ಸಂದರ್ಭದಲ್ಲಿ, ಯಶವಂತಪುರ-ಹೌರಾ ರೈಲಿನ ಕೊನೆಯ ಮೂರು ಬೋಗಿಗಳಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದಾಗ ಈ ಬೋಗಿಗಳು ಎದುರಿನ ಬೋಗಿಗಳಿಗಿಂತ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿದ್ದವು. ಈ ಬೋಗಿಗಳಲ್ಲಿದ್ದ ಅನೇಕ ಪ್ರಯಾಣಿಕರು ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ರೈಲಿನಲ್ಲಿ ಅಪಘಾತದಿಂದ ಬದುಕುಳಿದ ಕನ್ನಡಿಗರು ವಿವರಿಸಿದರು. ಸ್ವಲ್ಪ ಸಮಯದ ನಂತರ ಯಶವಂತಪುರ-ಹೌರಾ ರೈಲು 12-30 ರಾವೆಲ್‌ಗೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು ಎಂದು ಅವರು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಬೈಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.
ರೈಲು ನಿನ್ನೆ (ಜೂ.02) ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್ ಬದಲಿಸಿದೆ. ಇದರಿಂದಾಗಿ ಕಳಸ ತಾಲೂಕಿನ 110 ಜನರ ಬೋಗಿ ರೈಲಿನ ಮೊದಲ ಬೋಗಿಗಳಾಗಿದ್ದವು. ಇವರು ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ 4 ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಈ ನಿಲ್ದಾಣದ ರೈಲಿನಲ್ಲಿ 1294 ಪ್ರಯಾಣಿಕರು ತೆರಳಿದ್ದರು. 1294 ಪ್ರಯಾಣಿಕರ ಪೈಕಿ 994 ಜನ ಟಿಕೆಟ್ ಬುಕ್ ಮಾಡಿಸಿದ್ದರು. (ಏಜೆನ್ಸೀಸ್)