

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತೀವಾರ ಐದಕ್ಕಿಂತ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಶುಕ್ರವಾರ (ಡಿ.9) 11 ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿರುವ ಸುದ್ದಿ ಇದೆ. ಇಷ್ಟೊಂದು ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿರುವುದು ಹೊಸದೇನಲ್ಲ. ಈ ವರ್ಷವೇ ಒಂದೆರಡು ಬಾರಿ, 10ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಈ ವಾರ ಸಹ ಅದು ಮುಂದುವರೆಯಲಿದೆ.
ಈ ವಾರದ ಚಿತ್ರಗಳ ಪೈಕಿ ಅತೀ ನಿರೀಕ್ಷಿತ ಚಿತ್ರವೆಂದರೆ ಅದು 'ವಿಜಯಾನಂದ'. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ಆದ 'ವಿಜಯಾನಂದ' ಚಿತ್ರವುಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಬರೀ ಭಾರತದಲ್ಲಷ್ಟೇ ಅಲ್ಲ, ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ವಿಜಯಾನಂದ' ಬಿಡುಗಡೆಯಾಗಲಿದೆ.
'ವಿಜಯಾನಂದ' ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಿಹಾಲ್ ರಜಪೂತ್ ನಿರ್ವಹಿಸಿದ್ದು, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಭರತ್ ಬೋಪಣ್ಣ, ಸಿರಿ, ಅರ್ಚನಾ ಗೊಟ್ಟಿಗೆ, ಶೈನ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಆರ್ಎಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ. ಆನಂದ್ ಸಂಕೇಶ್ವರ ನಿರ್ಮಿಸಿರುರವ ಈ ಚಿತ್ರವನ್ನು ರಿಷಿಕಾ ಶರ್ಮ ನಿರ್ದೇಶನ ಮಾಡಿದ್ದು, ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದಾರೆ.
ಇದಲ್ಲದೆ ಪ್ರಮೋದ್ ಅಭಿನಯದ 'ಬಾಂಡ್ ರವಿ', 'ಪಂಖುಂ', 'ಮೈಸೂರು ಡೈರೀಸ್', 'ಡಿ 56', 'ಪ್ರಾಯಶಃ', 'ಸುನಾಮಿ 143', 'ಕ್ಷೇಮಗಿರಿಯಲ್ಲಿ ಕರ್ನಾಟಕ', 'ನಾನೇ ನರರಾಕ್ಷಸ', 'ಹೊಸ ದಿನಚರಿ' ಮತ್ತು 'ಬಿಹೈಂಡ್ ಸಂವೊನ್' ಚಿತ್ರಗಳು ಬಿಡುಗಡೆಯಾಗುವುದಾಗಿ ಈಗಾಗಲೇ ಘೋಷಣೆಯಾಗಿವೆ. ಒಟ್ಟಾರೆ 11 ಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ಈಗಲೇ ಹೇಳುವುದು ಕಷ್ಟ. ಕಾರಣಾಂತರಗಳಿಂದ ಒಂದೆರಡು ಚಿತ್ರಗಳು ಹಿಂದಕ್ಕೆ ಸರಿದರೆ ಅಥವಾ ಅದರ ಬದಲು ಬೇರೆ ಚಿತ್ರಗಳು ಸೇರ್ಪಡೆಯಾದರೆ ಅದರಲ್ಲಿ ಆಶ್ಚರ್ಯವಿಲ್ಲ.