ದಿವಿಜ ಸಹಕಾರ ಸಂಸ್ಥೆಯಿಂದ 11.50 ಲಕ್ಷ ರೂ. ನೆರವು

brahmana sabha
ಚಿಕ್ಕಮಗಳೂರಿನ ಬ್ರಹ್ಮ ಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಬಿ.ವಿ.ಸುರೇಶ್ ಉದ್ಘಾಟಿಸಿದರು. ಪಿ.ಮಂಜುನಾಥ ಜೋಷಿ, ಕೆ.ಆರ್.ದತ್ತಾತ್ರಿ ಇತರರಿದ್ದರು.
Published on

ಚಿಕ್ಕಮಗಳೂರು: ಸಮುದಾಯದ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾಕ್ಕೆ ದಿವಿಜ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತವು ಇದುವರೆಗೆ 11.50 ಲಕ್ಷ ರೂ.ನೆರವು ನೀಡಿದೆ ಎಂದು ಸಂಸ್ಥೆಯ ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎನ್.ಭಟ್ ಹೇಳಿದರು.
ನಗರದ ಬ್ರಹ್ಮ ಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಾಲಿನಲ್ಲಿ 2.15 ಲಕ್ಷ ರೂ. ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅನೇಕ ವರ್ಷಗಳಿಂದ ಬ್ರಾಹ್ಮಣ ಮಹಾಸಭಾ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಬೇಕಾದರೆ ಆರ್ಥಿಕವಾಗಿ ಸ್ವಾವಲಂಬನೆ ಹೊಂದಿರಬೇಕಾಗುತ್ತದೆ. ಯಾವುದೇ ಸರ್ಕಾರಿ ಸೌಲಭ್ಯದಿಂದ ವಂಚಿತವಾಗಿರುವ ಈ ಸಂಘಟನೆ ಬಲಗೊಳ್ಳಬೇಕಾದರೆ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬರೂ ಕೂಡ ಆರ್ಥಿಕ ಸ್ವಾವಲಂಬನೆ ಹೊಂದಿರಬೇಕು ಎಂದು ಹೇಳಿದರು.
ದಿವಿಜ ಪತ್ತಿನ ಸಹಕಾರ ಸಂಘ ಪ್ರಾರಂಭವಾಗಿ 13 ವರ್ಷ ಪೂರೈಸಿದೆ. ಆರಂಭದಲ್ಲಿ ತಾಲೂಕುಮಟ್ಟದ ವ್ಯಾಪ್ತಿಯನ್ನು ಹೊಂದಿದ್ದ ಈ ಸಂಘ ಕಳೆದ ಮೂರ‌್ನಾಲ್ಕು ವರ್ಷಗಳಿಂದ ರಾಜ್ಯದ ಐದು ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಉದ್ಯಮಿ ಡಿ.ಎಚ್.ನಟರಾಜ್ ಅವರ ನೇತೃತ್ವದ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಫಲವಾಗಿ ಕಳೆದ ವರ್ಷ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಸ್ಥೆ ಎಂಬ ಪ್ರಶಸ್ತಿಗೂ ಭಾಜನವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಮಾಹಿತಿ ಕೇಂದ್ರದ ಜಿಲ್ಲಾಮಟ್ಟದ ಅಧಿಕಾರಿ ಸರಸ ಕೃಷ್ಣ ಕಿರಣ್ ಮಾತನಾಡಿ, ವೃತ್ತಿಯ ಜತೆಗೆ ತಮ್ಮ ಮನೆಯಲ್ಲೇ ಆಸಕ್ತ ವಿದ್ಯಾರ್ಥಿಗಳಿಗೆ ಗಣಿತ ವಿಷಯ ಬೋಧಿಸುತ್ತಿದ್ದು ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಜ್ಞಾನ ಬೆಳೆಸಿಕೊಳ್ಳಲು ಅಗತ್ಯ ಸಲಹೆ-ಸೂಚನೆಗಳನ್ನು ನೀಡುವುದಾಗಿ ಹೇಳಿದರು.
ಹಿರಿಯ ವೈದ್ಯ ಬಿ.ವಿ.ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಕೋಶಾಧಿಕಾರಿ ಶ್ಯಾಮಲಾ ಎಂ.ರಾವ್, ನಿರ್ದೇಶಕ ಕೆ.ಆರ್.ದತ್ತಾತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net