108 ಸೂರ್ಯಮಂತ್ರ-ನಮಸ್ಕಾರ ಇಂದು

Published on

ಹಾಸನ : ರಥಸಪ್ತಮಿ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.4ರಂದು ನೂರಾರು ಯೋಗ ಬಂಧುಗಳು ಸೇರಿ 108 ಸೂರ್ಯ ಮಂತ್ರಗಳೊಂದಿಗೆ 108 ಸೂರ್ಯ ನಮಸ್ಕಾರ ಸಮರ್ಪಣೆ ನಡೆಯಲಿದೆ ಎಂದು ಪತಂಜಲಿ ಯೋಗ ಶಿಕ್ಷಣಾ ಸಮಿತಿ ಕರ್ನಾಟಕ ವಲಯ ಸಂಚಾಲಕಿ ಶೋಭಾ ಯೋಗರಾಜ್ ತಿಳಿಸಿದರು.

ರಥಸಪ್ತಮಿ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸಬಹುದು. ಶ್ರೀ ಪತಂಜಲಿ ಯೋಗ ಶಿಕ್ಷಣಾ ಸಮಿತಿ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ 2000ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿ ಲಕ್ಷಾಂತರ ಯೋಗ ಬಂಧುಗಳ ಮಹಾ ಪರಿವಾರವಾಗಿ ಉಚಿತವಾಗಿ ಸಾವಿರಾರು ಯೋಗ ಶಿಕ್ಷಕರು ಜನರಿಗೆ ಆರೋಗ್ಯ ಧನಾತ್ಮಕ ಚಿಂತನೆ ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ಆದರ್ಶ ಕುಟುಂಬ ನಿರ್ವಹಣೆ ತರಬೇತಿ ನೀಡುತ್ತಿದೆ. ಅಭ್ಯಂಜನ ಸ್ನಾನ ಸತ್ಸಂಗ, ಮಾತೃ ಭೋಜನ ಹಾಗೂ ಮಾತೃ ಪೂಜನ, ಸ್ನೇಹ ಮಿಲನ, ಆರೋಗ್ಯದೆಡೆಗೆ ಯೋಗನಡಿಗೆ, ಭಾರತ ಮಾತಾ ಪೂಜಾ ಎಲ್ಲಾ ಹಬ್ಬ ಹರಿದಿನಗಳ ಆಚರಣೆ ಲೋಕ ಕಲ್ಯಾಣಕ್ಕಾಗಿ ಪ್ರತಿದಿನ ಅಗ್ನಿಹೋತ್ರ ಯೋಗ ನಮಸ್ಕಾರಗಳಾದ ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ, ಚಂದ್ರ ನಮಸ್ಕಾರ, ದುರ್ಗಾ ನಮಸ್ಕಾರ, ಶಿವ ನಮಸ್ಕಾರ, ಹನುಮ ನಮಸ್ಕಾರ, ಹಾಗೂ ಸೂರ್ಯ ನಮಸ್ಕಾರ, ವಿಷ್ಣು ನಮಸ್ಕಾರಗಳನ್ನು ಹೇಳಿಕೊಡುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಸಮಿತಿ ಯೋಗ ವಿದ್ಯೆ ಮೂಲಕ ಮನುಷ್ಯನನ್ನು ಮಾನವನನ್ನಾಗಿ ಸುಮಧುರ ಜೀವನ ನಡೆಸಲು, ಮಾನಸಿಕ, ಶಾರೀರಿಕ, ನೈತಿಕ, ಭೌತಿಕ ಹಾಗೂ ಸಾಮಾಜಿಕ ಶಿಕ್ಷಣ ಕೊಡುತ್ತೇವೆ. ಕರ್ನಾಟಕ ವಿವಿ ಮಾನ್ಯತೆ ಪಡೆದಿದ್ದು, ಯೋಗ ಸರ್ಟಿಫಿಕೇಟ್, ಯೋಗ ಡಿಪ್ಲೊಮಾ, ಯೋಗ ಪಿ.ಜಿ. ತರಬೇತಿ ನಡೆಸುತ್ತಿದೆ. ಪ್ರಸ್ತುತ ಅರಕಲಗೂಡು, ಬೇಲೂರು ಹಾಗೂ ಆಲೂರು ತಾಲೂಕುಗಳಲ್ಲಿ ಶಾಖೆಗಳಿವೆ ಎಂದರು.

ಯೋಗ ಶಿಕ್ಷಕರಾಗ ಬಯಸುವವರಿಗೆ ಜಿಲ್ಲಾ ಮಟ್ಟದ ಪ್ರಶಿಕ್ಷಣ (4 ದಿನ) ರಾಜ್ಯಮಟ್ಟದ ಪ್ರಾಂತ ಪ್ರಶಿಕ್ಷಣ (5 ದಿನ) ಹಾಗೂ ಆತ್ಮಾನುಸಂಧಾನ ಹಾಗೂ ಪ್ರಗತ ಪ್ರಶಿಕ್ಷಣತರಬೇತಿಯನ್ನು ಊಟ ವಸತಿಯೊಂದಿಗೆ ಉಚಿತವಾಗಿ ಕೊಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖ್ಯ ಶಿಕ್ಷಕ ನೀಲಕಂಠಸ್ವಾಮಿ, ಚಂದ್ರು, ಸುನಂದಕ್ಕ, ಚಂದ್ರಕ್ಕ, ಗೀತಕ್ಕ, ಪ್ರೇಮಕ್ಕ ಇದ್ದರು.

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net