

ಹೈದರಾಬಾದ್ನ ಚೆವೆಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಂದ ಅನಧಿಕೃತ ಪಾರ್ಟಿ.
ಕುಡಿದ ಮತ್ತಿನಲ್ಲಿ 108 ವಿದ್ಯಾರ್ಥಿಗಳು, ಮೂವರಿಂದ ಗಾಂಜಾ ಸೇವನೆ ಪತ್ತೆ.
ಇನ್ಸ್ಟಾಗ್ರಾಮ್ನಲ್ಲಿ ಪಾರ್ಟಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಕಾಲೇಜು ವಿದ್ಯಾರ್ಥಿ.
ಹೈದರಾಬಾದ್; ನಗರದ ಹೊರವಲಯದ ಚೆವೆಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮೆಟಾ ಗ್ರಾಮದ ಫಾರ್ಮ್ಹೌಸ್ನಲ್ಲಿ ಅನಧಿಕೃತ ಪಾರ್ಟಿ ನಡೆದಿದೆ. ಚೆವೆಲ್ಲಾ ಪೊಲೀಸರು ದಾಳಿ ನಡೆಸಿದಾಗ ವಿದ್ಯಾರ್ಥಿಗಳು ಮದ್ಯದ ಮತ್ತಿನಲ್ಲಿ ಹಾಗೂ ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್ ಹೊರವಲಯದ ಚೆವೆಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮೆಟಾ ಗ್ರಾಮದ ಫಾರ್ಮ್ಹೌಸ್ನಲ್ಲಿ ವಿಶೇಷ ಕಾರ್ಯಾಚರಣೆ ತಂಡದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಿದ್ದು, ಅನಧಿಕೃತ ಪಾರ್ಟಿಯಲ್ಲಿ 108 ವಿದ್ಯಾರ್ಥಿಗಳು ಮಧ್ಯ ಸೇವಿಸಿರುವುದು ಹಾಗೂ ನಾಲ್ವರು ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ.
ವಿದ್ಯಾರ್ಥಿಗಳಿಂದ ಗಾಂಜಾ, 7 ಕಾರುಗಳು, 3 ಬೈಕ್ಗಳು ಮತ್ತು 70 ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪಾರ್ಟಿ ಆಯೋಜಕ ಸೇರಿದಂತೆ ಮೂವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಚೆವೆಲ್ಲಾ ಇನ್ಸ್ಪೆಕ್ಟರ್ ಕೆ. ನರೇಂದರ್ ರೆಡ್ಡಿ, ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿಟಿ ಹೊರವಲಯದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಯಾವುದೇ ಅನುಮತಿಯಿಲ್ಲದೆ ಪೂಲ್ ಪಾರ್ಟಿ ಆಯೋಜಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಅದರ ಆಧಾರದ ಮೇಲೆ ದಾಳಿ ನಡೆಸಿದೆವು ಎಂದು ಹೇಳಿದ್ದಾರೆ.
ಮುಂದುವರೆದು, ನಾವು ಫಾರ್ಮ್ಹೌಸ್ನಲ್ಲಿ ಆಯೋಜಕರು ಸೇರಿದಂತೆ ಒಟ್ಟು 108 ವಿದ್ಯಾರ್ಥಿಗಳನ್ನು ಪತ್ತೆ ಮಾಡಿದ್ದೇವೆ. 24 ವರ್ಷದ ಅಂಡರ್ಗ್ರಾಜುಯೇಟ್ ವಿದ್ಯಾರ್ಥಿಯೊಬ್ಬ ಪಾರ್ಟಿ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದ. ಪ್ರತಿ ವ್ಯಕ್ತಿಗೆ 1,000 ರೂ.ನಿಂದ 2,000 ರೂ. ವರೆಗೆ ಶುಲ್ಕ ವಿಧಿಸಿದ್ದಾನೆ. ಶುಕ್ರವಾರ ಬೆಳಿಗ್ಗೆಷ್ಟೇ ಅವನು ಪಾರ್ಟಿ ನಡೆಯುವ ಸ್ಥಳದ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂದು ವಿವರಿಸಿದರು.
ನಾವು ಸ್ಥಳಕ್ಕೆ ಧಾವಿಸಿದಾಗ ವಿದ್ಯಾರ್ಥಿಗಳ ತಂಡ ಯಾವುದೇ ಪರವಾನಗಿ ಇಲ್ಲದೆ ಮದ್ಯ ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಡ್ರಗ್ಸ್ ಪರೀಕ್ಷೆ ನಡೆಸಿದಾಗ ಆಯೋಜಕ ಸೇರಿದಂತೆ ಮೂವರು ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ. ಪೊಲೀಸರು ಆಯೋಜಕನ ಬಳಿ ಇದ್ದ 50 ಗ್ರಾಂ ಗಾಂಜಾವನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಪಾರ್ಟಿಯಲ್ಲಿದ್ದ ಒಟ್ಟು 108 ವಿದ್ಯಾರ್ಥಿಗಳಲ್ಲಿ 37 ಮಂದಿ ಯುವತಿಯರಾಗಿದ್ದು, ಬಹುತೇಕರು ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ. ಈ ಸಂಬಂಧ NDPSಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಗಾಂಜಾ ಸೇವಿಸಿ ಸಿಕ್ಕಿಬಿದ್ದ ಮೂವರು ವಿದ್ಯಾರ್ಥಿಗಳನ್ನು ವ್ಯಸನ ಮುಕ್ತಿ ಕೇಂದ್ರಕ್ಕೆ ಸೇರಿಸಲು ಸೂಚನೆ ನೀಡಲಾಗಿದೆ ಎಂದರು, (ಏಜೆನ್ಸೀಸ್).