

ನವದೆಹಲಿ: ಭಾರತೀಯ ವಾಯುಪಡೆಯ ವಿಶೇಷ ವಿಮಾನವೊಂದು ಇಂದು ಬೆಳಿಗ್ಗೆ 107 ಭಾರತೀಯರೂ ಸೇರಿದಂತೆ 168 ಜನರನ್ನು ಅಫ್ಘಾನಿಸ್ತಾನದಿಂದ ಹೊತ್ತುತಂದಿದ್ದು, ದೆಹಲಿ ಬಳಿಯ ಹಿಂದೋನ್ ಏರ್ ಬೇಸ್ನಲ್ಲಿ ಇಳಿದಿದೆ. ಹೀಗೆ ಆಗಮಿಸಿರುವ ಯಾತ್ರಿಗಳಿಗೆ ಕರೊನಾದ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದರೊಂದಿಗೆ ಏರ್ ಇಂಡಿಯ, ಇಂಡಿಗೋ ಮತ್ತು ವಿಸ್ತಾರ ಏರ್ಲೈನ್ಗಳ ಮೂರು ಇತರ ವಿಮಾನಗಳೂ ಕಾಬುಲ್ನಿಂದ ತೆರವುಗೊಳಿಸಲ್ಪಟ್ಟ ಭಾರತೀಯರನ್ನು ತಜಿಕಿಸ್ತಾನದ ರಾಜಧಾನಿ ದುಶಾನ್ಬೆ ಮತ್ತು ಖತಾರ್ನ ದೋಹಾದಿಂದ ಹೊತ್ತುತಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಆಗಿಂದಾಗ್ಗೆ ಟ್ವಿಟರ್ನಲ್ಲಿ ತೆರವು ಕಾರ್ಯಾಚರಣೆಯ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಶನಿವಾರದಂದು 87 ಭಾರತೀಯರು ಮತ್ತು ಇಬ್ಬರು ನೇಪಾಳೀಯರನ್ನು ಐಎಎಫ್ ವಿಮಾನವು ಕಾಬುಲ್ನಿಂದ ಭಾರತಕ್ಕೆ ಕರೆದುತಂದಿತ್ತು. ಈ ವಿಮಾನದ ಪ್ರಯಾಣಿಕರು 'ಭಾರತಮಾತಾ ಕಿ ಜೈ' ಎಂದು ಘೊಷಣೆ ಕೂಗುತ್ತಿರುವ ವಿಡಿಯೋ ತುಣುಕನ್ನು ಕಾಣಬಹುದು. (ಏಜೆನ್ಸೀಸ್)