105 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು

HUN-JUNE-19-1(DHARMASTHALA YOJANE PROGRAMME)
Published on

ಹುಣಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ಶಿಷ್ಯವೇತನ ಯೋಜನೆಯಡಿ ತಾಲೂಕಿನ 105 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರಾತಿ ಪತ್ರ ವಿತರಿಸಲಾಯಿತು.
ನಗರದ ಯೋಜನೆ 2ನೇ ಶಾಖೆಯ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು.
ಯೋಜನೆ ವತಿಯಿಂದ ಗ್ರಾಮೀಣರ ಸರ್ವತೋಮುಖ ಅಭಿವೃದ್ಧಿಗಾಗಿ ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಮಕ್ಕಳ ಏಳಿಗೆಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರನ್ನು ಮುನ್ನಡೆಸಲು ಜ್ಞಾನದೀಪ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಇದೀಗ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯ ಪಾಲುದಾರ ಬಂಧುಗಳ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ವ್ಯಾಸಂಗ ಮಾಡುವ ಮಕ್ಕಳಿಗಾಗಿ ಸುಜ್ಞಾನ ನಿಧಿ ಶಿಷ್ಯವೇತನ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ಈವರೆಗೆ 80 ಸಾವಿರ ವಿದ್ಯಾರ್ಥಿಗಳು ಸರಿಸುಮಾರು 90 ಕೋಟಿ ರೂ.ಗಳ ಆರ್ಥಿಕ ಸಹಾಯದ ಲಾಭ ಪಡೆದಿದ್ದಾರೆ. ತಾಲೂಕಿನಲ್ಲಿ 105 ವಿದ್ಯಾರ್ಥಿಗಳನ್ನು ಗುರುತಿಸಿ ಮಂಜೂರಾತಿ ಪತ್ರ ನೀಡಲಾಗುತ್ತಿದ್ದು, 22 ಲಕ್ಷ ರೂ.ಗಳ ಆರ್ಥಿಕ ಸಹಾಯ ಪಡೆದಿದ್ದಾರೆ ಎಂದು ವಿವರಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯು ಸಮಾಜದ ಎಲ್ಲ ಕ್ಷೇತ್ರಗಳ ಜನರಿಗೂ ಒಂದಲ್ಲ ಒಂದು ಕಾರ್ಯಕ್ರಮದ ಮೂಲಕ ಸಹಾಯಹಸ್ತ ನೀಡುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಸ್.ಲೋಕೇಶ್ ಮಾತನಾಡಿದರು. ಯೋಜನೆಯ 1ನೇ ಶಾಖೆಯ ಯೋಜನಾಧಿಕಾರಿ ನಾರಾಯಣಶೆಟ್ಟಿ, 2ನೇ ಶಾಖೆಯ ಯೋಜನಾಧಿಕಾರಿ ಧನಂಜಯ, ಮೇಲ್ವಿಚಾರಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net