100ಕ್ಕೂ ಹೆಚ್ಚು ಕ್ರೀಡಾಂಗಣ: ನರೇಗಾ ಮೂಲಕ ಹೊಸತನಕ್ಕೆ ಕೈಹಾಕಿದ ಜಿಪಂ

07-08-rama-stadium
Published on

ರಾಮನಗರ : ಶಿಕ್ಷಣ ಎಂದರೆ ಕೇವಲ ಪಾಠವಲ್ಲ. ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಲೇ ಇದೆ. ಇದೀಗ ಇದಕ್ಕೆ ಪೂರಕವಾಗಿ ರಾಮನಗರ ಜಿಲ್ಲಾ ಪಂಚಾಯಿತಿ ನರೇಗಾ ಮೂಲಕ ಹೊಸತನಕ್ಕೆ ಕೈ ಹಾಕಿದ್ದು ಶಾಲೆಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿದೆ.

ರಾಮನಗರ ಜಿಲ್ಲಾ ಪಂಚಾಯಿತಿಯು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳ ಆಟದ ಮೈದಾನಗಳಿಗೆ ಹೊಸ ರೂಪ ನೀಡುತ್ತಿದೆ. ಈಗಾಗಲೇ ಹತ್ತಾರು ಅಂಕಣಗಳು ಸಿದ್ಧಗೊಂಡಿವೆ. ವಾಲಿಬಾಲ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಶಟಲ್, ಕಬಡ್ಡಿ, ಖೋಖೋ ಮತ್ತಿತರ ಆಟಗಳ ಅಂಕಣಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಇದಲ್ಲದೆ ಅಥ್ಲೆಟಿಕ್ಸ್‌ಗೆ ಬೇಕಾಗುವ ಓಟದ ಟ್ರ್ಯಾಕ್‌ಗಳು, ಹೈಜಂಪ್ ಮತ್ತು ಲಾಂಗ್‌ಜಂಪ್ ಅಂಕಣ ಸಹ ಶಾಲೆಗಳ ಅಂಗಳದಲ್ಲಿ ನಿರ್ಮಾಣ ಆಗುತ್ತಿವೆ.ರಾಮನಗರ ತಾಲೂಕಿನ ಕೂನಗಲ್ ಸರ್ಕಾರಿ ಪ್ರೌಢಶಾಲೆ ಮೈದಾನವನ್ನು ಮೊದಲಿಗೆ ನರೇಗಾ ಯೋಜನೆ ಅಡಿ ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಆಕರ್ಷಕ ಅಥ್ಲೆಟಿಕ್ ಅಂಕಣ ಎಲ್ಲರ ಮನಸೆಳೆದಿತ್ತು. ಅದರ ಬೆನ್ನಲ್ಲಿಯೇ ಇನ್ನೂ ಹತ್ತು ಹಲವು ಕಾಮಗಾರಿಗಳು ಶಾಲೆಗಳ ಮೈದಾನಗಳಲ್ಲಿ ನಡೆಯುತ್ತಿವೆ.

ವಿವಿಧ ಕ್ರೀಡಾ ಅಂಕಣಗಳು ಸಿದ್ಧ : ಜಿಲ್ಲೆಯ 100ಕ್ಕೂ ಹೆಚ್ಚು ಶಾಲೆಗಳ ಮೈದಾನಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ. ಇದರಲ್ಲಿ ಪ್ರಮುಖವಾಗಿ ಶತಮಾನದ ಇತಿಹಾಸದ ಹೊಂದಿರುವ ರಾಮನಗರ ತಾಲೂಕಿನ ಜಾಲಮಂಗಲ ಸರ್ಕಾರಿ ಪ್ರೌಢಶಾಲೆ ಸೇರಿದೆ. ಇಲ್ಲಿನ 3 ಎಕರೆ 10 ಗುಂಟೆ ವಿಸ್ತೀರ್ಣದ ಮೈದಾನದಲ್ಲಿ 200 ಮೀಟರ್ ಉದ್ದದ 8 ಓಟದ ಲೇನ್‌ಗಳ ಟ್ರ್ಯಾಕ್, ಜತೆಗೆ ಲಾಂಗ್‌ಜಂಪ್ ಪಿಟ್, ಖೋಖೋ, ವಾಲಿಬಾಲ್, ಕಬಡ್ಡಿ ಅಂಕಣಗಳೂ ಸಿದ್ಧವಾಗಿವೆ.

ಬಹುತೇಕ ಕಾಮಗಾರಿ ಮುಗಿದಿದ್ದು, ಬಣ್ಣದ ಸಿಂಗಾರ ಬಾಕಿ ಇದೆ. ಇದರೊಟ್ಟಿಗೆ ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲ ಆಗುವಂತೆ ನಡಿಗೆ ಪಥ ಸಹ ನಿರ್ಮಾಣ ಆಗುತ್ತಿದೆ. ಇದೆಲ್ಲವನ್ನೂ ಸೇರಿ 10 ಲಕ್ಷ ರೂ. ಖರ್ಚು ಮಾಡುತ್ತಿದೆ. ಇನ್ನು ರಾಮನಗರ ತಾಲೂಕಿನ ಹುಲಿಕೆರೆ-ಗುನ್ನೂರು ಹಾಗೂ ಸುಗ್ಗನಹಳ್ಳಿ ಶಾಲೆಗಳಲ್ಲಿಯೂ ಇದೇ ಮಾದರಿಯಲ್ಲಿ ಆಟದ ಮೈದಾನಗಳ ಮರುನಿರ್ಮಾಣ ಆಗುತ್ತಿದ್ದು, ಕಾಮಗಾರಿಗಳು ಅಂತಿಮ ಹಂತದಲ್ಲಿವೆ.

ಕ್ರೀಡೆಗೆ ಪ್ರೋತ್ಸಾಹ :  ಒಲಂಪಿಕ್ಸ್‌ನಂತಹ ಕ್ರೀಡಾಕೂಟದಲ್ಲಿ ದೇಶದ ಕ್ರೀಡಾಪಟುಗಳು ಕಷ್ಟಪಟ್ಟು ಪದಕ ಜಯಿಸಿದಾಗಷ್ಟೇ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತವೆ. ಆದರೆ, ಶಾಲಾ ಹಂತದಿಂದಲೇ ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿ, ತರಬೇತಿ ನೀಡುವ ಕೆಲಸವನ್ನು ರಾಮನಗರ ಜಿಲ್ಲಾ ಪಂಚಾಯಿತಿ ಕೈಗೊಂಡಿದೆ. ಇದಕ್ಕೆ ಸ್ವಯಂ ಆಸಕ್ತಿ ವಹಿಸಿರುವ ಜಿಪಂ ಸಿಇಒ ಇಕ್ರಂ, ನರೇಗಾ ಯೋಜನೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕನಿಷ್ಠ ಒಂದು ಉತ್ತಮ ಆಟದ ಮೈದಾನ ನಿರ್ಮಿಸಲಾಗುತ್ತಿದೆ. ಸದ್ಯ ಸರ್ಕಾರಿ ಶಾಲೆಗಳಲ್ಲಿ ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಅಲ್ಲೆಲ್ಲ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ನೆರವನ್ನೂ ಪಡೆಯಲಾಗುತ್ತಿದ್ದು, ಅವರು ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ಮಕ್ಕಳು ಶಾಲೆಗೆ ಬರುವ ಮುನ್ನ ಈ ಅಂಕಣಗಳನ್ನು ಸಿದ್ಧಪಡಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ. ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ, ಮತ್ತಿಕೆರೆ-ಶೆಟ್ಟಿಹಳ್ಳಿ, ಮಾಗಡಿ ತಾಲೂಕಿನ ಕುದೂರು, ಶ್ರೀಗಿರಿಪುರ ಹೀಗೆ 118 ಶಾಲೆಗಳಲ್ಲಿ ಮೈದಾನಗಳು ನಿರ್ಮಾಣಗೊಳ್ಳುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net