ಬ್ಯಾಂಕ್​ಗಳಿಂದ 10,09,511 ಕೋಟಿ ರೂ. ಸಾಲ ರೈಟ್​ಆಫ್: ವಸೂಲಾತಿಗೆ ಬಾಧಕವಿಲ್ಲ, ಸರ್ಕಾರದ ಪರಿಹಾರ ನಿಧಿಗೆ ಸಿಎಸ್​ಆರ್ ಫಂಡ್

Parliament
Published on

ನವದೆಹಲಿ: ಬ್ಯಾಂಕ್​ಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10,09,511 ಕೋಟಿ ರೂ. ಸುಸ್ತಿಸಾಲವನ್ನು ರೈಟ್ ಆಫ್ (ಸಾಲದ ಲೆಕ್ಕವನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡುವುದು) ಮಾಡಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿಗೆ ಮಂಗಳವಾರ ತಿಳಿಸಿದರು.

ಬ್ಯಾಲೆನ್ಸ್ ಶೀಟ್ ಸ್ವಚ್ಛಗೊಳಿಸಲು, ತೆರಿಗೆ ಪ್ರ್ರೊಜನ ಪಡೆಯಲು ಮತ್ತು ಬಂಡವಾಳವನ್ನು ಉತ್ತಮವಾಗಿಸಿಕೊಳ್ಳಲು ನಿಯಮಿತ ಪ್ರಕ್ರಿಯೆ ಭಾಗವಾಗಿ ಬ್ಯಾಂಕ್​ಗಳು ಅನುತ್ಪಾದಕ ಆಸ್ತಿ (ಎನ್​ಪಿಎ) ಗಳನ್ನು ರೈಟ್ ಆಫ್ ಮಾಡುತ್ತವೆ ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದರು. ಸಾಲಗಳು ರೈಟ್ ಆಫ್ ಆದರೂ ಸಾಲಗಾರರು ಮರುಪಾವತಿಸುವ ಜವಾಬ್ದಾರಿ ಹೊಂದಿರುತ್ತಾರೆ. ಸಾಲ ವಸೂಲಾತಿ ಟ್ರಿಬ್ಯುನಲ್​ಗಳಲ್ಲಿ ಹಾಗೂ ದಿವಾಳಿತನ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವುದು ಹಾಗೂ ಎನ್​ಪಿಎ ಮಾರಾಟ ಮೂಲಕ ಕ್ರಮ ಕೈಗೊಳ್ಳುವುದನ್ನು ಬ್ಯಾಂಕ್ ಮುಂದುವರಿಸುತ್ತವೆ. ರೈಟ್ ಆಫ್ ಮಾಡಿದ ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಬ್ಯಾಂಕುಗಳು 1,32,036 ಕೋಟಿ ರೂ. ವಸೂಲಾತಿ ಮಾಡಿವೆ ಎಂದೂ ಅವರು ತಿಳಿಸಿದರು.

ಸರ್ಕಾರದ ಪರಿಹಾರ ನಿಧಿಗೆ ಸಿಎಸ್​ಆರ್ ಫಂಡ್: ಕೇಂದ್ರ ಸರ್ಕಾರದ ವಿವಿಧ ಪರಿಹಾರ ನಿಧಿಗಳಿಗೆ ಕಾರ್ಪೆರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ಫಂಡ್ ನೀಡುವ ನಿರ್ಧಾರವನ್ನು ಹಿಂದಿನ ಯುಪಿಎ ಸರ್ಕಾರವು 2013ರಲ್ಲಿ ತೆಗೆದುಕೊಂಡಿತ್ತು ಎಂದು ನಿರ್ಮಲಾ ಸೀತಾರಾಮನ್ ರಾಜ್ಯ ಸಭೆಗೆ ತಿಳಿಸಿದರು.

16 ಲಕ್ಷಕ್ಕೂ ಹೆಚ್ಚು ಸೈಬರ್ ಕ್ರೖೆಂ: ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಭಯೋತ್ಪಾದನೆ ಹರಡುವ ಸಾಧ್ಯತೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದ ಸಚಿವ ನಿತ್ಯಾನಂದ ರೈ, ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ 16 ಲಕ್ಷಕ್ಕೂ ಹೆಚ್ಚು ಸೈಬರ್ ಕ್ರೖೆಂ ಪ್ರಕರಣಗಳು ವರದಿಯಾಗಿದ್ದು, 32 ಸಾವಿರಕ್ಕೂ ಹೆಚ್ಚು ಎಫ್​ಐಆರ್​ಗಳು ದಾಖಲಾಗಿವೆ ಎಂದರು.

ಡಿಜಿಟಲ್ ಆಸ್ತಿಯಿಂದ 60.46 ಕೋಟಿ ರೂ. ತೆರಿಗೆ: ಟಿಡಿಎಸ್ ನಿಬಂಧನೆ ಪರಿಚಯಿಸಿದಾಗಿನಿಂದ ವರ್ಚುವಲ್ ಡಿಜಿಟಲ್ ಆಸ್ತಿಗಳ ವಹಿವಾಟಿನಿಂದ 60.46 ಕೋಟಿ ರೂ. ತೆರಿಗೆ ಸ್ವೀಕರಿಸಲಾಗಿದೆ ಎಂದು ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.

ಹುತಾತ್ಮರಿಗೆ ನಮನ: 21 ವರ್ಷಗಳ ಹಿಂದೆ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಚಿವರು, ವಿರೋಧ ಪಕ್ಷಗಳ ಸಂಸದರು ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದರು.

ಕರ್ನಾಟಕದ 38 ಕ್ಲೇಮ್ ಪಾವತಿ: ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆಯಡಿ ತಲಾ 50 ಲಕ್ಷ ರೂ.ಗಳ 2,302 ಕ್ಲೇಮ್ಳು ಹಾಗೂ ಕರ್ನಾಟಕದ 38 ಸೇರಿದಂತೆ ವಿವಿಧ ರಾಜ್ಯಗಳ 465 ವೈದ್ಯರ ಕುಟುಂಬಗಳಿಗೆ ಕ್ಲೇಮ್ ಪಾವತಿಸಲಾಗಿದೆ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.

ಸಂಸತ್​ಗೆ ಸರ್ಕಾರದ ಉತ್ತರ

  • 2021-22ನೇ ಸಾಲಿನಲ್ಲಿ 3,744 ಸ್ನಾತಕೋತ್ತರ ವೈದ್ಯಕೀಯ ಸೀಟುಗಳು ಖಾಲಿ ಉಳಿದಿವೆ. ಹಾಗೆಯೇ ಪದವಿ ಹಂತದಲ್ಲಿ 92 ಸಾವಿರಕ್ಕೂ ಹೆಚ್ಚು ಸೀಟುಗಳು ಭರ್ತಿ ಆಗಿಲ್ಲ.
  • ಆದಾಯ ತರುವಂತಹ ಪ್ರವಾಸೋದ್ಯಮ ತಾಣಗಳನ್ನು ಪ್ರವಾಸೋದ್ಯಮ ಸಚಿವಾಲಯ ಗುರುತಿಸಬೇಕು ಮತ್ತು ಅಂತಹ ಸ್ಥಳಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ 331ನೇ ವರದಿಯಲ್ಲಿ ಹೇಳಿದೆ.
  • ಕಳೆದ ಮೂರು ವರ್ಷದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ 1,811 ಎನ್​ಜಿಒಗಳ ಲೈಸನ್ಸ್ ರದ್ದುಗೊಂಡಿದೆ.
  • ಡಿಸೆಂಬರ್ 8ರವರೆಗೂ ದೇಶದಲ್ಲಿ 23 ಮಂಗನ ಸಿಡುಬು ಕಾಯಿಲೆ ಪ್ರಕರಣಗಳು ವರದಿಯಾಗಿವೆ.
  • ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲ ಕ್ರೋಢಿಕರಣಕ್ಕೆ ಜನವರಿ-ಮಾರ್ಚ್ ಅವಧಿಯಲ್ಲಿ ಸಾವರಿನ್ ಗ್ರೀನ್ ಬಾಂಡ್​ಗಳ ವಿತರಣೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net