

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶುಕ್ರವಾರ ಈ ಸಂಖ್ಯೆ 6872ಕ್ಕೆ ಏರಿದೆ. ಗುರುವಾರ 5,865 ಇದ್ದ ಕರೊನಾ ಪ್ರಕರಣ 24ಗಂಟೆಯಲ್ಲಿ 1005ರಷ್ಟು ಏರಿಕೆಯಾಗಿದೆ. ಇದುವರೆಗಿನ ಗರಿಷ್ಠ ಏರಿಕೆ ಪ್ರಮಾಣ ಇದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗೇ ಕೊವಿಡ್-19ರಿಂದ ಮೃತಪಟ್ಟವ ಸಂಖ್ಯೆ 206.
ಲಾಕ್ಡೌನ್ ಅವಧಿ ಮುಕ್ತಾಯಗೊಳ್ಳಲು ಇನ್ನು ಮೂರು ದಿನ ಬಾಕಿ ಇರುವಾಗ ಹೀಗೆ ಏಕಾಏಕಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ಒಡಿಶಾ ಮತ್ತು ಪಂಜಾಬ್ ರಾಜ್ಯಗಳು ಲಾಕ್ಡೌನ್ನ್ನು ಏಪ್ರಿಲ್ 30ರವರೆಗೂ ವಿಸ್ತರಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಜಗತ್ತಿನ ಕರೊನಾ ಸೋಂಕಿತ ರಾಷ್ಟ್ರಗಳ ನಾಯಕರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಲಾಕ್ಡೌನ್ ಹಿಂಪಡೆಯುವ ಮುನ್ನ ಯೋಚಿಸಿ ಎಂದು ಹೇಳಿದೆ. ಒಮ್ಮೆಲೇ ಲಾಕ್ಡೌನ್ ತೆಗೆದು ಜನರು ಬೀದಿಗೆ ಇಳಿದರೆ, ವೈರಸ್ ಹರಡುವ ಪರಿಣಾಮ ಮತ್ತೆ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಎಂದಿದೆ.
ಮಾ.24ರ ಮಧ್ಯರಾತ್ರಿಯಿಂದ ಭಾರತದಲ್ಲಿ ಲಾಕ್ಡೌನ್ ಇದೆ. ಹಾಗಾಗ್ಯೂ ಕೂಡ ಕರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಶುಕ್ರವಾರ ಒಂದೇ ದಿನ 1000 ಹೊಸ ಕರೊನಾ ಪ್ರಕರಣ ಪತ್ತೆಯಾಗಿದ್ದು ತೀವ್ರ ಆತಂಕ ಸೃಷ್ಟಿಸಿದೆ.
ಏ.10ರ ರಾತ್ರಿ 9ಗಂಟೆಯವರೆಗೆ ಕರೊನಾ ಸೋಂಕಿತರ ಸಂಖ್ಯೆ 6872 ಹಾಗೂ ಮೃತಪಟ್ಟವರ ಸಂಖ್ಯೆ 206 ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಂಕಿಅಂಶ ತಿಳಿಸಿದೆ. ಆದರೆ 9.30ರವರೆಗೆ ವಿವಿಧ ರಾಜ್ಯಗಳಿಂದ ವರದಿಯಾದ ಕರೊನಾ ಸೋಂಕಿತರು ಮತ್ತು ಸಾವಿನ ಟ್ಯಾಲಿ ಮಾಡಿರುವ ಪಿಟಿಐ, ದೇಶದಲ್ಲಿ ಸುಮಾರು 7510 ಜನರಿಗೆ ಸೋಂಕು ತಗುಲಿದೆ. 251 ಮಂದಿ ಮೃತಪಟ್ಟಿದ್ದಾರೆ ಮತ್ತು 700 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದೆ.
ಮಹಾರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಉತ್ತರಪ್ರದೇಶಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಏರುತ್ತಿದೆ.
ಮಹಾರಾಷ್ಟ್ರದಲ್ಲಿ 1574 ಮಂದಿ ಕರೊನಾ ಸೋಂಕಿತರಿದ್ದು, 100 ಜನ ಮೃತಪಟ್ಟಿದ್ದಾರೆ. ತಮಿಳುನಾಡು ಮತ್ತು ದೆಹಲಿ ಕೂಡ ಈಗಾಗಲೇ 900ರ ಗಡಿದಾಟಿವೆ.
ಈ ಮಧ್ಯೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದು, ಲಾಕ್ಡೌನ್ ಮುಂದುವರಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)