1000 ಅಡಿ ಆಳದ ಕೊಳವೆ ಬಾವಿಗೆ ಕ್ಯಾಮೆರಾ ಬಿಟ್ಟ ಯುವಕನಿಗೆ ಕಂಡಿದ್ದು ಎದೆ ಝಲ್ ಎನಿಸುವ ದೃಶ್ಯ!

Borewell
Published on

ನವದೆಹಲಿ: ಹಲವೆಡೆ ಜಮೀನಿನಲ್ಲಿ ಬೆಳೆ ಬೆಳೆಯಲು ಕೊಳವೆಬಾವಿ ಕೊರೆಸುವುದನ್ನು ನೀವು ನೋಡಿರುತ್ತೀರಿ. ನೀರು ದೊರೆಯದೇ ಅರ್ಧಕ್ಕೆ ಕೈಬಿಟ್ಟ ಬೋರ್​ವೆಲ್​ ಒಳಗೆ ಆಕಸ್ಮಿಕವಾಗಿ ಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡ ಎಷ್ಟೋ ಕರಾಳ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಮಕ್ಕಳು ಬಿದ್ದಾಗ ಬದುಕಿ ಬರಲೆಂದು ದೇವರಲ್ಲಿ ಪ್ರಾರ್ಥನೆ ಸಹ ಮಾಡಿದ್ದೇವೆ ಮತ್ತು ಕೊಳವೆ ಬಾವಿಗಳನ್ನು ಕೊರೆಸಿದವರಿಗೆ ಶಾಪ ಸಹ ಹಾಕಿದ್ದಾರೆ.

ಈ ಕೊಳವೆ ಬಾವಿಗಳು ಅತ್ಯಂತ ಡೇಂಜರ್​. ಇಲ್ಲಿಗೆ ಬಿದ್ದ ಮಕ್ಕಳು ಮತ್ತೆ ಬದುಕಿ ಬರುತ್ತಾರೆ ಎಂಬ ಗ್ಯಾರಂಟಿ ಇರುವುದೇ ಇಲ್ಲ. ಒಂದು ವೇಳೆ ಬದುಕಿ ಬಂದರೆ ಅದು ಮರುಜನ್ಮವೇ ಸರಿ. ಅಷ್ಟೊಂದು ಡೇಂಜರ್​ ಆಗಿರುವ ಕೊಳವೆ ಬಾವಿಯ ಒಳಗೆ ಹೇಗಿರುತ್ತದೆ ಎಂಬುದು ಬಹುತೇಕರು ಕಂಡಿಲ್ಲ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರು ಕೊಳವೆಬಾವಿಯೊಳಗೆ ಹೇಗಿದೆ ಎಂದು ವಿಡಿಯೋ ಚಿತ್ರೀಕರಿಸಿದ್ದು, ವಿಡಿಯೋ ವೈರಲ್​ ಆಗಿದೆ. ಅದನ್ನು ನೋಡಿದರೆ ಕೊಳವೆ ಬಾವಿಯೊಳಗಿನ ದೃಶ್ಯ ಎದೆ ಝಲ್​ ಎನಿಸುವಂತಿದೆ.

ಭೂಮಿಯೊಳಗೆ ಏನಿದೆ ಎಂದು ತಿಳಿಯಲು ಯುವಕನೊಬ್ಬ 1000 ಅಡಿ ಆಳದ ಕೊಳವೆ ಬಾವಿಗೆ ಗೋಪ್ರಾ ಕ್ಯಾಮೆರಾವನ್ನು (ಗೋಪ್ರಾ ಕ್ಯಾಮೆರಾ) ಕಳುಹಿಸಿದನು. ಆ ಬೋರ್​ವೆಲ್​ನಲ್ಲಿ​ ಒಬ್ಬ ವ್ಯಕ್ತಿಯ ತಲೆ ನುಗ್ಗುವಷ್ಟು ಮಾತ್ರ ರಂಧ್ರವಿದೆ. ಮಕ್ಕಳಂತೂ ಸುಲಭವಾಗಿ ಬಿದ್ದುಬಿಡುತ್ತಾರೆ. ಭೂಮಿಯಿಂದ ಮೇಲೆ ಕಬ್ಬಿಣದ ಕೇಸಿಂಗ್ ಪೈಪ್ ಅನ್ನು ಬಿಡಲಾಗಿದೆ. ಕ್ಯಾಮೆರಾಗೆ ಸಣ್ಣ ಹಗ್ಗವನ್ನು ಕಟ್ಟಿ, ಕೇಸಿಂಗ್ ಪಂಪ್‌ನೊಳಗೆ ಕ್ಯಾಮೆರಾವನ್ನು ಕಳುಹಿಸುತ್ತಾರೆ.

ಕ್ಯಾಮೆರಾವನ್ನು ಕೆಳಕ್ಕೆ ಇಳಿಸುವಾಗ ಕ್ಯಾಮೆರಾಗೆ ಹಾನಿಯಾಗದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಂಡರು. ಮೊದಲು ಪ್ಲಾಸ್ಟಿಕ್ ಬಾಕ್ಸ್​ನಲ್ಲಿ ಕ್ಯಾಮೆರಾ ಇಟ್ಟು, ಭೂಮಿಯೊಳಗೆ ಕತ್ತಲು ಇದ್ದಿದ್ದರಿಂದ ಟಾರ್ಚ್ ಲೈಟ್ ಅಳವಡಿಸಿ, ಎರಡನ್ನೂ ಕವರ್​ನಲ್ಲಿ ಹಾಕಿ ದಾರದ ಸಹಾಯದಿಂದ ಬಿಗಿಯಾಗಿ ಕಟ್ಟಿ ಹಗ್ಗವನ್ನು ನಿಧಾನವಾಗಿ ಕೇಸಿಂಗ್ ಪಂಪ್​​ ಒಳಗೆ ಇಳಿಸಿದರು.

ಈ ವೇಳೆ ಕೊಳವೆಬಾವಿ ಒಳಗೆ ಹೋಗುತ್ತಿದ್ದಂತೆ ಕಿರಿದಾದ ರಂಧ್ರದಲ್ಲಿ ಕಗ್ಗತ್ತಲೆಯ ಹಾದಿಯಲ್ಲಿ ಬರಿ ಕಲ್ಲು ಬಂಡೆಗಳೆ ಇವೆ. ಕ್ಯಾಮೆರಾವನ್ನು 200 ಅಡಿಯವರೆಗೂ ಕಳುಹಿಸಲಾಗಿದ್ದು, ಒಂದು ಹಂತದಲ್ಲಿ ನೀರು ಇರುವುದು ಅರಿವಿಗೆ ಬಂದಿದೆ. ನೀರಿನ ಒಳಗೆ ಇಳಿಸಿದಷ್ಟು ಕ್ಯಾಮರಾ ಹಾಳಾಗುತ್ತದೆ ಎಂಬ ಭಯದಿಂದ ಅದನ್ನು ಮತ್ತೆ ಮೇಲಕ್ಕೆ ಎಳೆದುಕೊಂಡರು. 

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನಂತರ ಕೆಲ ನೆಟ್ಟಿಗರು ನಾವು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕೆಲವು ಪ್ರಾಣಿಗಳು ಅಥವಾ ಮಕ್ಕಳು ಅಪಾಯಕ್ಕೆ ಸಿಲಕಬಹುದು. ಕೂಡಲೇ ಇದನ್ನು ಮುಚ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನಿಸಿತು ಎಂಬುದನ್ನು ನಮಗೆ ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net