ಸರ್ಕಾರ ಉರುಳಿಸಲು 1000 ಕೋಟಿ ತನಿಖೆ ಮಾಡಬೇಕು; ಡಿಸಿಎಂ ಡಿ.ಕೆ.ಶಿವಕುಮಾರ್

dk
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ 1000 ಕೋಟಿ ರೂ. ಮೀಸಲಿಟ್ಟಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಮುಡಾ ಹಗರಣದ ಬಳಿಕ ಚುನಾವಣಾ ಬಾಂಡ್ ಅಸವನ್ನು ಕೈಗೆತ್ತಿಕೊಂಡಿದ್ದ ಕಾಂಗ್ರೆಸ್‌ಗೆ ಯತ್ನಾಳ್ ಹೇಳಿಕೆ ಮತ್ತೊಂದು ಆಯುಧವನ್ನು ಕೊಟ್ಟಂತಾಂಗಿದೆ.

ಯತ್ನಾಳ್ ಹೇಳಿಕೆ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ ನಿವಾಸಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯತ್ನಾಳ್ ಹೇಳಿಕೆ ಕುರಿತು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಪಕ್ಷ ಹಾಗೂ ಸರ್ಕಾರ ಉರುಳಿಸಲು ಈ ಕೆಲಸ ಮಾಡಲಾಗುತ್ತಿದೆ. ನಮ್ಮ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಲಾಗುವುದು. ಈ ಕೃತ್ಯ ಐಟಿಯವರಿಂದ ತನಿಖೆಗೆ ಒಳಗಾಗಬೇಕು ಎಂದರು.

ಇದೇ ವಿಷಯ ಕುರಿತು ಪ್ರತಿಕ್ರಿಯಿಸಿದ ಡಾ.ಪರಮೇಶ್ವರ, ಸಾವಿರ ಕೋಟಿ ನಾವು ನೋಡಿಲ್ಲಪ್ಪ. ಸರ್ಕಾರ ಅಸ್ಥಿರಕ್ಕೆ 1000 ಕೋಟಿ ಯಾರು ಎತ್ತಿಟ್ಟುಕೊಂಡಿದ್ದಾರೆ ಗೊತ್ತಿಲ್ಲ. 1000 ಕೋಟಿ ಅಂದರೆ ಅದು ಅಪರಾಧವಾಗುತ್ತದೆ. ಹಾಗಿದ್ದರೆ ತನಿಖೆ ಮಾಡಬೇಕು. ಮುಂದೆ ಸುಮೊಟೋ ಕೇಸ್ ಹಾಕಬೇಕಾಗುತ್ತದೆ ಎಂದು ಪರಮೇಶ್ವರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net