93 ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ

vidhanasoudha
Published on

ಬೆಂಗಳೂರು: ಕೆರೆ ಅಭಿವೃದ್ಧಿ ಮತ್ತು ಬಲವರ್ಧನೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರ 100 ಕೋಟಿ ರೂ. ವಿಪತ್ತು ಉಪಶಮನ ನಿಧಿಯಿಂದ ಬಿಡುಗಡೆ ಮಾಡಿ ಆದೇಶಿಸಿದೆ.

ಮುಂಬರುವ ತಿಂಗಳುಗಳಲ್ಲಿ ಮಳೆ ನೀರು ಬಳಸಿಕೊಳ್ಳಲು ಸಣ್ಣ ನೀರಾವರಿ ಇಲಾಖೆಗೆ ಸೇರಿದ 93 ಕೆರೆಗಳ ಅಭಿವೃದ್ಧಿ ಮತ್ತು ಬಲವರ್ಧನೆ ಕಾಮಗಾರಿ ಕೈಗೊಳ್ಳಲು ಈ ಹಣ ಬಿಡುಗಡೆ ಮಾಡಲಾಗಿದೆ.

2023ನೇ ಸಾಲಿನ ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ ಒಟ್ಟಾರೆ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮಿ. ಆಗಿದ್ದು, ಈ ಅವಧಿಯಲ್ಲಿ 642 ಮಿ.ಮಿ.ಮಳೆ ಮಾತ್ರ ಆಗಿತ್ತು. ರಾಜ್ಯದಲ್ಲಿ 2023 ರ ಮುಂಗಾರು ಋತುವಿನಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದೆ.

ಇದರಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೀರಾ ಕೆಳಮಟ್ಟ ತಲುಪಿತ್ತಲ್ಲದೆ, ಅಂತರ್ಜಲ ಕುಸಿದಿತ್ತು. ಪರಿಣಾಮವಾಗಿ ರಾಜ್ಯದಲ್ಲಿ ನೀರಿನ ಅಭಾವ ಪರಿಸ್ಥಿತಿ ತಲೆದೋರಿತ್ತು. ಆದ್ದರಿಂದ ರಾಜ್ಯದ ಬರ ಉಪಶಮನಕ್ಕಾಗಿ ಕೆರೆಗಳ ಅಭಿವೃದ್ಧಿ ಅತ್ಯಂತ ಅವಶ್ಯ ಎಂದು ಮನಗಂಡ ರಾಜ್ಯ ಸರ್ಕಾರ 93 ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಅಭಿವೃದ್ಧಿಗೊಳಿಸುವ ಕೆರೆಗಳ ವಿವರಗಳನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಹ ವಿವರಗಳೊಂದಿಗೆ ಮಂಡಿಸುವಂತೆಯೂ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net