10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವು

crime
Published on

ಬೆಂಗಳೂರು: 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ವರ್ತೂರಿನಲ್ಲಿ ನಡೆದಿದೆ.
ವರ್ತೂರಿನ ಪ್ರಸ್ಟೇಜ್ ಲೇಕ್‌ಸೈಡ್ ಹ್ಯಾಬಿಟೆಡ್ ಅಪಾರ್ಟ್‌ಮೆಂಟ್ ನಿವಾಸಿ ರಾಜೇಶ್ ದಮೇರ್ಲಾ ಅವರ ಪುತ್ರಿ ಮಾನ್ಯ(೧೦) ಮೃತ ಬಾಲಕಿ. ಗುರುವಾರ ರಾತ್ರಿ ೭.೩೦ರ ಸುಮಾರಿಗೆ ಈ ಘಟನೆ ನಡೆದಿದೆ.


ಆಂಧ್ರಪ್ರದೇಶದ ವಿಜಯವಾಡ ಮೂಲದ ರಾಜೇಶ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಪತ್ನಿ ಮತ್ತು ಮಗಳೊಂದಿಗೆ ವರ್ತೂರಿನ ಪ್ರಸ್ಟೇಜ್ ಲೇಕ್‌ಸೈಡ್ ಹ್ಯಾಬಿಟೆಡ್ ಅಪಾರ್ಟ್‌ಮೆಂಟ್‌ನ ೧೭ನೇ ಟವರ್‌ನ ಫ್ಲ್ಯಾಟ್‌ನಲ್ಲಿ ನೆಲೆಸಿದ್ದರು. ಮೃತ ಮಾನ್ಯ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗುರುವಾರ ರಾತ್ರಿ ೮ ಗಂಟೆ ಸುಮಾರಿಗೆ ಮಾನ್ಯ ಹಾಗೂ ಇತರೆ ಮಕ್ಕಳು ಅಪಾರ್ಟ್‌ಮೆಂಟ್‌ನ ಟವರ್-೨೦ರ ಬಳಿ ಇರುವ ಈಜುಕೊಳದ ಬಳಿ ಆಟವಾಡುತ್ತಿದ್ದರು. ಈ ವೇಳೆ ಮಾನ್ಯ ಈಜುಕೊಳಕ್ಕೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅಪಾರ್ಟ್‌ಮೆಂಟಿನ ನಿವಾಸಿಗಳು ತಕ್ಷಣ ಮಾನ್ಯಳನ್ನು ಈಜುಕೊಳದಿಂದ ಮೇಲಕ್ಕೆ ಎತ್ತಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾನ್ಯ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿದ್ದಾರೆ.


ಪುತ್ರಿ ಸಾವಿನ ಬಗ್ಗೆ ದೂರು ನೀಡಿದ ತಂದೆ:
ಪುತ್ರಿ ಮಾನ್ಯಳ ಸಾವಿನ ಬಗ್ಗೆ ತಂದೆ ರಾಜೇಶ್ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈಜುಕೊಳದ ಸಮೀಪದ ವಿದ್ಯುತ್ ತಂತಿ ಬಿದ್ದಿದ್ದು, ಆಟವಾಡುವಾಗ ಮಾನ್ಯ ಆ ವಿದ್ಯುತ್ ತಂತಿ ತುಳಿದಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಾನ್ಯಳ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ:
ರಾತ್ರಿ ೭.೩೦ ರ ಸುಮಾರಿಗೆ ಬಾಲಕಿ ಲ್‌ಟಿನಲ್ಲಿ ಕೆಳಗೆ ಬಂದಿದ್ದಾಳೆ. ೭.೪೦ ರ ಸುಮಾರಿಗೆ ಈ ಘಟನೆ ನಡೆದಿದ್ದು, ೧೦ ನಿಮಿಷಗಳ ನಂತರ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ವಿಚಾರ ಗೊತ್ತಾಗಿದೆ. ೭.೫೫ ಸುಮಾರಿಗೆ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net