ತೆಲಂಗಾಣಕ್ಕೆ 10 ಟಿಎಂಸಿ ಕೃಷ್ಣಾ ನೀರು: ವಿಜಯೇಂದ್ರ ಕಳವಳ | Neglect of the interest of the state farmers

B Y Vijayendra
Published on

ಬೆಂಗಳೂರು: ನೆರೆಯ ತೆಲಂಗಾಣಕ್ಕೆ ಮಾನವೀಯ ನೆಲೆಯಲ್ಲಿ ನೆರವು ಕಾರಣ ನೀಡಿದ ರಾಜ್ಯ ಸರ್ಕಾರ ಕೃಷ್ಣಾ ನದಿಗೆ 10 ಟಿಎಂಸಿ ಅಡಿ ನೀರು ಬಿಟ್ಟಿರುವುದು ಆಘಾತಕಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದಲ್ಲಿ ಕೃಷ್ಣಾ ನದಿ ಅವಲಂಬಿತ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಒಂದೂವರೆ ಟಿಎಂಸಿ ಅಡಿ ನೀರು ಪೂರೈಕೆಗೆ ತೆಲಂಗಾಣ ಸರ್ಕಾರ ಕೋರಿದೆ ಎನ್ನಲಾಗಿತ್ತು. ಆದರೆ ಬಯಲಾಗಿರುವ ಮಾಹಿತಿ ಪ್ರಕಾರ ಒಂದೂವರೆ ಅಲ್ಲ 10 ಟಿಎಂಸಿ ಅಡಿ ನೀರು ಬಿಡಲಾಗಿದೆ.

ಈ ನಡುವೆ ತೆಲಂಗಾಣಕ್ಕೆ 10 ಟಿಎಂಸಿ ಅಡಿ ನೀರು ಹರಿಸಿರುವುದು ಗೊತ್ತಿಲ್ಲವೆಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಹಾಗಿದ್ದರೆ ಇಷ್ಟೊಂದು ಪ್ರಮಾಣದ ನೀರು ಹರಿಸಲು ಸೂಚನೆ ನೀಡಿದವರು ಯಾರು ? ಎಂದು ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಓಲೈಕೆಗಾಗಿ ರೈತರ ಬದುಕಿಗೆ ಕೊಳ್ಳಿ

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಕನ್ನಡಿಗರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ತನ್ನ ಮಿತ್ರ ಪಕ್ಷ ಡಿಎಂಕೆಯನ್ನು ಓಲೈಸಲು ತಮಿಳುನಾಡಿಗೆ ನೀರು ಬಿಟ್ಟು, ಕಾವೇರಿ ತೀರದ ನಮ್ಮ ರೈತರ ಬದುಕಿಗೆ ಕೊಳ್ಳಿಯಿಟ್ಟಿತ್ತು. ಇದೀಗ ಕೃಷ್ಣಾ ತೀರದ ನಮ್ಮ ರೈತರ ಪರಿಶ್ರಮದ ಬೆವರಿನ ಬೆಳೆಗಳನ್ನು ಒಣಗಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ಕಾಂಗ್ರೆಸ್ ಸರ್ಕಾರವನ್ನು ಓಲೈಸಲು ಕೃಷ್ಣಾ ನದಿ ನೀರು ಅವಲಂಬಿತ ರಾಜ್ಯದ ರೈತರು ನೀರಿಗಾಗಿ ಪರಿತಾಪವನ್ನು ಕಡೆಗಣಿಸಿದೆ. ಕಾಂಗ್ರೆಸ್ ವರಿಷ್ಠರ ಮಡಳಿ ಕರ್ನಾಟಕದ ನದಿಗಳಿಂದ ಹರಿಯುವ ನೀರನ್ನು ತನ್ನ ಮಿತ್ರಪಕ್ಷಗಳು ಹಾಗೂ ತನ್ನ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಹರಿಯ ಬಿಡಲು ಸೂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಹೋರಾಟದ ಎಚ್ಚರಿಕೆ

ಕೃಷ್ಣಾ ನದಿ ತೀರದಲ್ಲಿ ಬೆಳೆದ ಬೆಳೆಗಳು ಒಣಗಲಾರಂಭಿಸಿವೆ. ಇದರಿಂದ ಕಂಗಾಲಾಗಿರುವ ಒಬ್ಬ ರೈತ ಆತ್ಮಹ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ನೊಂದ ಕುಟುಂಬದ ಪರವಾಗಿ ಬಿಜೆಪಿ ದನಿ ಎತ್ತಲಿದೆ.

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ರೈತರು ಬೆಳೆದ ಬೆಳೆಗಳು ಒಣಗುತ್ತಿರುವಾಗ ತೆಲಂಗಾಣಕ್ಕೆ 10 ಟಿಎಂಸಿ ಅಡಿ ನೀರು ಬಿಟ್ಟಿರುವುದು ಖಂಡಿಸಿ, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಪರವಾಗಿ ಪಕ್ಷ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ರಾಜ್ಯ ಸರ್ಕಾರಕ್ಕೆ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net