

ಸುಲಭವಾಗಿ ಬೆಳೆದುಕೊಳ್ಳಲು ಸಾಧ್ಯವಾಗುವ, ಅತ್ಯಂತ ಅದ್ಭುತ ಔಷಧಿ ಗಿಡಗಳಲ್ಲಿ ಒಂದು ಒಂದೆಲಗ. ಆ ಸಸ್ಯದ ಬಗ್ಗೆ ಇಂದು ತಿಳಿದುಕೊಳ್ಳೋಣ. ಅಡುಗೆಯಲ್ಲಿಯೂ ಬಳಸಬಹುದಾದ, ನಿತ್ಯ ಬಳಕೆಗೆ ಯೋಗ್ಯವಾದ, ಆರೋಗ್ಯಕ್ಕೆ ಅತ್ಯಂತ ಶ್ರೇಯಸ್ಕರವಾದ ಔಷಧಿ ಸಸ್ಯ ಇದು. ಒಂದೆಲಗ ನಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಮುಪ್ಪನ್ನು ಮುಂದೂಡುವ ಗುಣಕೂಡ ಇದಕ್ಕೆ ಇದೆ. ಇದು ರುಚಿಯಲ್ಲಿ ಕಹಿಯಾಗಿದ್ದು ಸುಲಭವಾಗಿ ಜೀರ್ಣವಾಗುವಂಥದ್ದು. ತಂಪು ಗುಣವನ್ನು ಹೊಂದಿದ್ದು, ಕಫ ಮತ್ತು ಪಿತ್ತದೋಷಗಳನ್ನು ನಿಯಂತ್ರಿಸುತ್ತದೆ. ಇದಕ್ಕೆ ವಿಶೇಷವಾಗಿ ಮೇಧ್ಯ ಗುಣವಿದೆ ಎಂದು ಆಯುರ್ವೆದ ಹೇಳುತ್ತದೆ.
ಅಂದರೆ ಮಿದುಳು ಅಥವಾ ಬುದ್ಧಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳಲ್ಲಿಯೂ ಇದು ಅನುಕೂಲಕರ ಎಂದರ್ಥ. ಅದರಲ್ಲಿಯೂ ವಿಶೇಷವಾಗಿ, ಬೆಳೆಯುತ್ತಿರುವ ಮಕ್ಕಳಿಗೆ ಇದನ್ನು ಕೊಡುವುದರಿಂದ ಅವರ ಮಿದುಳು, ಮನಸ್ಸು, ಬುದ್ಧಿಯಲ್ಲಿ ಧನಾತ್ಮಕ ವಿಷಯಗಳಾದ ನೆನಪಿನ ಶಕ್ತಿ, ಧೈರ್ಯ, ಸಾತ್ವಿಕ ಗುಣ ಹೆಚ್ಚಾಗಿ ಋಣಾತ್ಮಕ ಅಂಶಗಳಾದ ಮರೆವು, ಭಯ, ಮಾನಸಿಕ ನಿಶ್ಶಕ್ತಿ ಕಡಿಮೆಯಾಗಲು ಸಹಾಯವಾಗುತ್ತದೆ. ಮಕ್ಕಳ ಬುದ್ಧಿ ಶಕ್ತಿ ಹೆಚ್ಚಾಗಬೇಕು ಎಂದಿರುವವರು ಇದರ ಜೊತೆಗೆ ಆಹಾರದಲ್ಲಿ ತುಪ್ಪ, ಕೊಬ್ಬರಿ ಎಣ್ಣೆ, ಬಾದಾಮಿ, ಬೂದುಗುಂಬಳ, ಪಿಸ್ತಾ, ಎಳ್ಳು, ಶೇಂಗಾ, ವಾಲ್ನಟ್, ಅಗಸೆ ಬೀಜ, ಮೊಳಕೆ ಕಾಳು, ಎಲ್ಲ ರೀತಿಯ ಹಣ್ಣುಗಳನ್ನು ಕೊಡಬೇಕು. ಬಿಸ್ಕೆಟ್, ಚಾಕೊಲೇಟ್, ಚಿಪ್ಸ್, ಬೇಕರಿ ತಿನಿಸುಗಳು, ಹೊರಗಡೆ ಸಿಗುವ ಕರಿದ ಪದಾರ್ಥಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಸಕ್ಕರೆಯ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಬದಲಿಗೆ ಜೋನಿಬೆಲ್ಲ ಅಥವಾ ಶುದ್ಧವಾದ ಜೇನುತುಪ್ಪವನ್ನು ಬಳಸಿದರೆ ಒಂದೆಲಗದ ಪೂರ್ಣ ಪ್ರಯೋಜನ ಸಿಗಲು ಸಾಧ್ಯವಾಗುತ್ತದೆ.
ಆಯುರ್ವೆದ ಗ್ರಂಥಗಳಲ್ಲಿ ಹೇಳಿರುವಂತೆ ಇದನ್ನು ನಿತ್ಯವೂ ಬಳಸುವುದರಿಂದ ಮುಪ್ಪು ದೂರವಾಗಿ ದೇಹದ ಶಕ್ತಿ ಹೆಚ್ಚುತ್ತದೆ. ದೇಹದ ಕಾಂತಿ ಕೂಡ ಇದರಿಂದ ಹೆಚ್ಚುತ್ತದೆ. ಸುಶ್ರುತ ಸಂಹಿತೆಯಲ್ಲಿ ಇದಕ್ಕೆ ಹೃದ್ಯ ಗುಣವಿದೆ ಎಂದು ಹೇಳಿದ್ದಾರೆ ಅಂದರೆ ಇದು ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ. ನಾಲಿಗೆಯ ರುಚಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಸುಲಭವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹಿಂದೆ ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಇದನ್ನು ಚಿಕ್ಕ ಮಕ್ಕಳಿಗೆ ಜ್ವರ, ಕಫ, ಕೆಮ್ಮಿನಂತಹ ತೊಂದರೆಗಳು ಆದಾಗ ಕೊಡುತ್ತಿದ್ದರು. ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸಿ ಪದೇಪದೇ ಜ್ವರ ನೆಗಡಿ, ಕೆಮ್ಮಿನ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುತ್ತಿತ್ತು. ಇದಕ್ಕೆ ವಿಷವನ್ನು ಕಡಿಮೆ ಮಾಡುವ ಗುಣ ಕೂಡ ಇದೆ. ಹಾಗಾಗಿ
ಇಂದು ನಾವು ಬೇರೆ ಬೇರೆ ರೀತಿಯಲ್ಲಿ ಸೇವಿಸುವ ವಿಷದ ಪ್ರಭಾವವನ್ನು ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ. ತುಂಬಾ ದಿನಗಳಿಂದ ಕೆಮ್ಮು, ದಮ್ಮಿನ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಆಗಷ್ಟೇ ಗುಣವಾದವರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ. ಇದಕ್ಕೆ ಉರಿಯೂತ ನಿರೋಧಕ ಗುಣವಿರುವ ಕಾರಣ ದೇಹದಲ್ಲಿ ಉಂಟಾಗುವ ಹಲವಾರು ರೀತಿಯ ತೊಂದರೆಗಳನ್ನು ಇದು ತಡೆಯು ತ್ತದೆ. ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಕೂಡ ಇದು ಸಹಕಾರಿಯಾಗಿದೆ. ಪಿತ್ತಕೋಶದ ಆರೋಗ್ಯವೃದ್ಧಿಗೆ ಇದು ಅನುಕೂಲಕರ. ಸಣ್ಣ ಪ್ರಮಾಣದ ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಕೂಡ ಇದು ಅತ್ಯಂತ ಲಾಭದಾಯಕವಾಗಿದೆ.
ಹತ್ತು ವರ್ಷದ ಒಳಗಿನ ಮಕ್ಕಳಿಗೆ
ದಿನಕ್ಕೆ ನಾಲ್ಕೈದು ಎಲೆಗಳಷ್ಟು ಒಂದೆಲಗವನ್ನು ಸೇವಿಸಲು ಕೊಡಬಹುದು. ದೊಡ್ಡವರು 10 ರಿಂದ 12 ಎಲೆಗಳನ್ನು ನಿತ್ಯವೂ ಸೇವಿಸಬಹುದು. ಇದರ ತಂಬುಳಿ, ಚಟ್ನಿಗಳನ್ನು ಮಾಡಿಕೊಂಡು ಕೂಡ ಸೇವಿಸಬಹುದು. ಮನೆಮಂದಿಗೆ ಬೇಕಾಗುವಷ್ಟು ಎಲೆಗಳನ್ನು ತಂದು ಅಗತ್ಯವಿರುವಷ್ಟು ನೀರು ಹಾಕಿ ಚೆನ್ನಾಗಿ ರುಬ್ಬಿ ಅದಕ್ಕೆ ಹಾಲು ಮತ್ತು ಅವಶ್ಯವಿದ್ದರೆ ಸ್ವಲ್ಪ ಜೋನಿಬೆಲ್ಲ ಹಾಕಿ ಕುಡಿಯಬಹುದು. ಬೆಳಗ್ಗೆ ಅಥವಾ ಮಧ್ಯಾಹ್ನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದು. ರಾತ್ರಿಯ ಸಮಯದಲ್ಲಿ ಇದರ ಸೇವನೆ ಅಷ್ಟು ಸರಿಯಲ್ಲ.