

ಭಾರತದ ವಿರುದ್ಧವಾಗಿ ಸದಾ ಪರಸ್ಪರ ಕೈಜೋಡಿಸುವ ಪಾಕಿಸ್ತಾನ ಹಾಗೂ ಚೀನಾಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಭಾರತವು ಗಡಿಯಲ್ಲಿ ಹತ್ತು ಜಲವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಉಭಯ ರಾಷ್ಟ್ರಗಳ ಜತೆ ಜಲ ಹಂಚಿಕೆಯಾಗುವ ನದಿಗಳಲ್ಲಿ ಈ ಯೋಜನೆಗಳನ್ನು ರೂಪಿಸಿ ಭಾರತವು ಅವಕ್ಕೆ ಶಾಕ್ ನೀಡಿದೆ. ಈ ಮೂಲಕ 6.8 ಗಿಗಾವಾಟ್ (680 ಕೋಟಿ ವಾಟ್) ವಿದ್ಯುತ್ ಉತ್ಪಾದಿಸುವುದರೊಂದಿಗೆ ಗಡಿಯಲ್ಲಿ ವಿದ್ಯುಚ್ಛಕ್ತಿ ಸ್ವಾವಲಂಬನೆ ಬಲಗೊಳಿಸಲೂ ಸಜ್ಜಾಗಿದೆ.
ಪಾಕಿಸ್ತಾನದ ಜತೆಗೆ 1960ರಲ್ಲಿ ಏರ್ಪಟ್ಟ ಸಿಂಧು ಜಲ ಒಪ್ಪಂದದ ಅಡಿಯಲ್ಲಿ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗಳನ್ನು ಭಾರತ ಜಾರಿಗೊಳಿಸುತ್ತಿದೆ. ಇದಕ್ಕಾಗಿ ಸರ್ಕಾರಿ ಸ್ವಾಮ್ಯದ ಎನ್ಎಚ್ಪಿಸಿ (ರಾಷ್ಟ್ರೀಯ ಜಲವಿದ್ಯುಚ್ಛಕ್ತಿ ನಿಗಮ) ಮೂಲಕ 68,000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ಹೆಚ್ಚುವರಿ ನೀರನ್ನು ತಡೆಯುವ ನಿಟ್ಟಿನಲ್ಲಿ ಭಾರತ ತನ್ನ ಹಕ್ಕನ್ನು ಚಲಾಯಿಸುವುದೇ ಈ ಯೋಜನೆಯ ಪ್ರಮುಖಾಂಶ.
ವಿವಾದಾತ್ಮಕವಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಚೀನಾ ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಗಳು ಕಾರ್ಯತಂತ್ರದ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಏಕೆಂದರೆ, ಆಕ್ರಮಣ ಅಥವಾ ಯುದ್ಧ ನಡೆಯಬಹುದಾದ ಸಂದರ್ಭದಲ್ಲಿ ನದಿ ನೀರಿನ ಹರಿವಿನ ಮೇಲಿನ ನಿಯಂತ್ರಣವು ಮುಖ್ಯ ಸಂಗತಿಯಾಗುತ್ತದೆ.
ಭಾರತವು ಈಗಾಗಲೇ ಪೂರ್ವದ ಗಡಿಯಲ್ಲಿ ಇದೇ ವಿಧಾನವನ್ನು ಅಳವಡಿಸಿಕೊಂಡಿದೆ. ಬ್ರಹ್ಮಪುತ್ರ ನದಿಯಿಂದ ಕೆಳಕ್ಕೆ ಹರಿಯುವ ನೀರನ್ನು ತಿರುಗಿಸುವ ಚೀನಾದ ಮಹತ್ವಾಕಾಂೆಯ ಯೋಜನೆಗೆ ಪ್ರತಿಯಾಗಿ ಅರುಣಾಚಲ ಪ್ರದೇಶದ ಯಿಂಗ್ಕಿಯಾಂಗ್ನಲ್ಲಿ ದೇಶದ ಎರಡನೇ ಅತಿದೊಡ್ಡ ಅಣೆಕಟ್ಟನ್ನು ನಿಮಿರ್ಸಲು ಯೋಜಿಸಲಾಗಿದೆ.
1,000 ಮೆಗಾವಾಟ್ ಸಾಮರ್ಥ್ಯದ ಪಾಕಲ್ ದುಲ್ ಯೋಜನೆ, 850 ಮೆಗಾವಾಟ್ ಸಾಮರ್ಥ್ಯದ ರಾಟಲ್ ಯೋಜನೆ, 624 ಮೆಗಾವಾಟ್ ಸಾಮರ್ಥ್ಯದ ಕಿರು ಯೋಜನೆ ಮತ್ತು 540 ಮೆಗಾವಾಟ್ನ ಕ್ವಾರ್ ಯೋಜನೆಗಳು ಇವಾಗಿದ್ದು, ಸಾರ್ವಜನಿಕ ವಲಯದ ಉದ್ಯಮವಾದ ಎನ್ಎಚ್ಪಿಸಿ ವತಿಯಿಂದಲೇ ನಿಮಿರ್ಸಲಾಗುತ್ತಿದೆ. ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನೆ ಸಂಸ್ಥೆಯಾಗಿದೆ ಎನ್ಎಚ್ಪಿಸಿ.
ಇದಲ್ಲದೆ, ಎನ್ಎಚ್ಪಿಸಿಯು 1,856 ಮೆಗಾವಾಟ್ನ ಸಾವಲ್ಕೋಟ್, 930 ಮೆಗಾವಾಟ್ನ ಕೀರ್ತಾಯಿ -2 ,240 ಮೆಗಾವಾಟ್ನ ಉರಿ - 2ನೇ ಹಂತ, 260 ಮೆಗಾವಾಟ್ನ ದುಲ್ಹಸ್ತಿ 2ನೇ ಹಂತದ ಯೋಜನೆ (ಇವೆಲ್ಲವುಗಳು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯ ಯೋಜನೆಗಳಾಗಿವೆ) ಹಾಗೂ 500 ಮೆಗಾವಾಟ್ನ ದುಗರ್ (ಹಿಮಾಚಲ ಪ್ರದೇಶ)ಯೋಜನೆಗಳನ್ನು ಜಾರಿಗೊಳಿಸಲು ಯೋಜಿಸಿದೆ.
ಭಯೋತ್ಪಾದನೆ ಪೀಡಿತ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮರುವಿಂಗಡಿಸಿದ ತಕ್ಷಣದಿಂದಲೇ ಕೇಂದ್ರ ಸರ್ಕಾರವು ಆಯಕಟ್ಟಿನ ಪ್ರಮುಖ ಜಲವಿದ್ಯುತ್ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಲು ಕ್ರಮ ಕೈಗೊಂಡಿದೆ. ಪಾಕಿಸ್ತಾನಕ್ಕೆ ಹರಿಯುವ ರಾವಿಯ ಮುಖ್ಯ ಉಪನದಿಗಳಲ್ಲಿ ಒಂದಾದ ಉಜ್ನ ನೀರನ್ನು ತಿರಗಿಸುವ ಯೋಜನೆಯನ್ನು ಕೂಡ ಭಾರತ ಹಾಕಿಕೊಂಡಿದೆ.
ಭಾರತಕ್ಕೆ ವರದಾನವಾದ ಸಿಂಧು ಜಲ ಒಪ್ಪಂದ
ಭಾರತಕ್ಕೆ ಅನುಕೂಲವಾಗಿರುವುದು 1960ರ ಸಿಂಧು ಜಲ ಒಪ್ಪಂದ. ಈ ಒಪ್ಪಂದದ ಆಧಾರದ ಮೇಲೆಯೇ, ಭಾರತವು ಕಿಶನ್ಗಂಗಾ, ಉರಿ ಮತ್ತು ಇತರ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಉದ್ದೇಶಿತ ಯೋಜನೆಗಳಿಗೆ ಈ ಒಪ್ಪಂದವೇ ಪ್ರಮುಖ ಆಧಾರವಾಗಿದೆ.
ಬಿಯಾಸ್, ರಾವಿ, ಸಟ್ಲೆಜ್, ಸಿಂಧು, ಚೆನಾಬ್ ಮತ್ತು ಝೀಲಂ ನದಿಗಳಿಗೆ ಈ ಒಪ್ಪಂದ ಅನ್ವಯಿಸುತ್ತದೆ. ಈ ಆರೂ ನದಿಗಳ ನೀರನ್ನು ಹೇಗೆ ಬಳಸಿಕೊಳ್ಳಬೇಕೆಂಬ ವಿಧಾನವನ್ನು ಈ ಒಡಂಬಡಿಕೆಯು ವಿವರಿಸುತ್ತದೆ. ಸಿಂಧು ಜಲ ಒಪ್ಪಂದದ ಪ್ರಕಾರ, ಯಾರು ಮೊದಲು ಯೋಜನೆಗಳನ್ನು ನಿಮಿರ್ಸುತ್ತಾರೋ ಅವರಿಗೆ ನದಿ ನೀರಿನ ಮೇಲೆ ಹಕ್ಕು ಇರುತ್ತದೆ.
ಪಾಕ್ ಆಕ್ಷೇಪಕ್ಕಿಲ್ಲ ಕಿಮ್ಮತ್ತು
ತನ್ನ ಗಡಿಯಲ್ಲಿ ಭಾರತ ಇಂತಹ ಯೋಜನೆಗಳನ್ನು ಜಾರಿಗೊಳಿಸುವುದನ್ನು ನೋಡುತ್ತ ಪಾಕಿಸ್ತಾನವೇನೂ ಸುಮ್ಮನೆ ಕುಳಿತಿಲ್ಲ. ಮೇಲಿಂದ ಮೇಲೆ ಆೇಪಿಸುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಎನ್ಎಚ್ಪಿಸಿಯ ಕಿಶನ್ಗಂಗಾ ಜಲವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮಪಿರ್ಸಿದ ನಾಲ್ಕು ವರ್ಷಗಳ ನಂತರ ಭಾರತವು ಗಡಿ ನದಿಗಳಲ್ಲಿ ವಿದ್ಯುತ್ ಯೋಜನೆಗಳ ಜಾರಿಯನ್ನು ವೇಗಗೊಳಿಸಿದೆ. ಝೀಲಂನ ಉಪನದಿಯಾದ ಕಿಶನ್ಗಂಗಾಗೆ ರೂಪಿಸಲಾಗಿರುವ 330 ಮೆಗಾವಾಟ್ನ ಯೋಜನೆಯು ಆಯಕಟ್ಟಿನ ಮಹತ್ವವನ್ನು ಹೊಂದಿದೆ. ಸಿಂಧು ಜಲ ಒಪ್ಪಂದದ ಪ್ರಕಾರ ಪಾಕಿಸ್ತಾನವು ಈ ಯೋಜನೆ ಜಾರಿಗೊಳಿಸುವುದನ್ನು ಆಕ್ಷೇಪಿಸಿತ್ತು. ಆದರೆ, 2013ರಲ್ಲಿ ಹೇಗ್ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯವು ಭಾರತದ ಪರವಾಗಿ ತೀರ್ಪು ನೀಡಿತು. ಕಿಶನ್ಗಂಗಾ ಯೋಜನೆ ಮಾತ್ರವಲ್ಲದೆ, ಚೆನಾಬ್ ನದಿಗೆ ರೂಪಿಸಲಾದ ಪಾಕಲ್ ದುಲ್ ಮತ್ತು ಲೋವರ್ ಕಲ್ನಾಯ್ ಜಲವಿದ್ಯುತ್ ಯೋಜನೆಗಳಿಗೂ ಪಾಕಿಸ್ತಾನವು ಆೇಪ ವ್ಯಕ್ತಪಡಿಸಿತ್ತು.
ಜಮ್ಮು- ಕಾಶ್ಮೀರಕ್ಕೆ ಬಂಪರ್ ಲಾಭ
ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿದ್ಯುಚ್ಛಕ್ತಿ ಅಭಿವೃದ್ಧಿ ನಿಗಮ ಹಾಗೂ ಎನ್ಎಚ್ಪಿಸಿ ಜಂಟಿಯಾಗಿ ಕೈಗೊಳ್ಳುತ್ತಿರುವ 540 ಮೆಗಾವಾಟ್ ಸಾಮರ್ಥ್ಯದ ಕ್ವಾರ್ ವಿದ್ಯುತ್ ಯೋಜನೆಯ ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಕಳೆದ ತಿಂಗಳು ಅನುಮತಿ ನೀಡಿದೆ. ಈ ಯೋಜನೆಯ ನಿರ್ಮಾಣ ಚಟುವಟಿಕೆಗಳಿಂದ ಅಂದಾಜು 2500 ಜನರಿಗೆ ನೇರ ಮತ್ತು ಪರೋ ಉದ್ಯೋಗ ದೊರೆಯಲಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದೆ. ಇದಲ್ಲದೆ, 4,548 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಉಚಿತವಾಗಿ ಈ ಪ್ರದೇಶಕ್ಕೆ ಲಭಿಸುತ್ತದೆ. ಕ್ವಾರ್ ಜಲ ವಿದ್ಯುತ್ ಯೋಜನೆಗಾಗಿ ಉಪಯೋಗಿಸುವ ನೀರಿನ ಬಳಕೆಯ ಶುಲ್ಕವಾಗಿ 40 ವರ್ಷಗಳ ಅವಧಿಯಲ್ಲಿ 4,941 ರೂಪಾಯಿ ಮೊತ್ತ ಲಭಿಸುತ್ತದೆ ಎಂದು ಇಂಧನ ಸಚಿವಾಲಯವು ಈ ಮೊದಲೇ ಘೋಷಿಸಿದೆ.