

ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಹಿನ್ನೆಲೆಯಲ್ಲಿ ಮೌಜಾಪುರ, ಜಫ್ರಾಬಾದ್, ಚಾಂದ್ಬಾಘ್ ಮತ್ತು ಕರ್ವಾಲ್ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೆ ಈಶಾನ್ಯ ದೆಹಲಿ ಭಾಗದಲ್ಲಿ ಜಾರಿಯಲ್ಲಿರುವ 144 ಸೆಕ್ಷನ್ನ್ನು ಮಾರ್ಚ್ 24ರವರೆಗೆ ವಿಸ್ತರಿಸಲಾಗಿದೆ.
ಪೌರತ್ವ ತಿದ್ದಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಸಂಬಂಧ ಇಂದು ಗೃಹ ಸಚಿಹ ಅಮಿತ್ ಷಾ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರೊಂದಿಗೆ ಸಭೆ ನಡೆಯಿತು.
ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧಿ ಗುಂಪಿನ ನಡುವೆ ಉಂಟಾಗಿರುವ ಗಲಾಟೆಯು ಹಿಂಸಾಚಾರಕ್ಕೆ ತಿರುಗಿರುವ ಪರಿಣಾಮ ಪೊಲೀಸ್ ಸಿಬ್ಬಂದಿ ಸೇರಿ ಸಾವಿಗೀಡಾಗಿದವರ ಸಂಖ್ಯೆ 10ಕ್ಕೇರಿದೆ.
ಗಲಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಸುಮಾರು 70 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಅಂಗಡಿಗಳು ಭಸ್ಮವಾಗಿದ್ದು, ಈಶಾನ್ಯ ದೆಹಲಿಯ ಭಜನ್ಪುರ, ಚಾಂದ್ ಬಾಘ್ ಮತ್ತು ಕರ್ವಾಲ್ ನಗರಗಳಲ್ಲಿ ಹಿಂಸಾಚಾರ ಹೆಚ್ಚಾಗಿತ್ತು.
ನಿನ್ನೆಯಷ್ಟೇ ಉಲ್ಬಣಗೊಂಡ ಹಿಂಸಾಚಾರಕ್ಕೆ ಈವರೆಗೂ 10 ಮಂದಿ ಬಲಿಯಾಗಿದ್ದು,ಗೃಹ ಸಚಿವಾಲಯ ಸೇನಾ ಪಡೆಗಳನ್ನು ನಿಯೋಜಿಸಿದೆ.
ಗಾಯಗೊಂಡ 130 ಮಂದಿಯಲ್ಲಿ 56 ಪೊಲೀಸ್ ಸಿಬ್ಬಂದಿಯಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿ ಮತ್ತು ಇತರರಿಗೆ ಸಿಎಂ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್)