3 ವರ್ಷಗಳಲ್ಲಿ 1 ಲಕ್ಷವಾಯ್ತು 1.68 ಕೋಟಿ ರೂಪಾಯಿ: ವಿದ್ಯುತ್ ಕಂಪನಿಯ ಷೇರು ಬೆಲೆ ಮತ್ತೆ ಈಗ ಹೆಚ್ಚಳವಾಗಿದ್ದೇಕೆ?

stock morket
Published on

ಮುಂಬೈ: ಷೇರು ಮಾರುಕಟ್ಟೆಯಲ್ಲಿನ ದೊಡ್ಡ ಕುಸಿತದ ನಡುವೆ, ಹೂಡಿಕೆದಾರರು ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯಾದ ವಾರೀ ರಿನ್ಯೂವಬಲ್ ಟೆಕ್ನಾಲಜೀಸ್ ಲಿಮಿಟೆಡ್‌ನ (Waaree Renewable Technologies Ltd.) ಷೇರುಗಳ ಮೇಲೆ ಮುಗಿಬಿದ್ದಿದ್ದಾರೆ. ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ, ಷೇರುಗಳ ಬೆಲೆ ಶೇಕಡಾ 5ರಷ್ಟು ಏರಿಕೆ ಕಂಡು ವರ್ಷದ ಗರಿಷ್ಠ ಬೆಲೆಯಾದ 2,071.05 ರೂ. ತಲುಪಿತು.

ಇತ್ತೀಚೆಗೆ ಕಂಪನಿಯು 5:1 ರ ಅನುಪಾತದಲ್ಲಿ ಷೇರುಗಳ ವಿಭಜನೆಯನ್ನು ಘೋಷಿಸಿರುವುದೇ ಸದ್ಯ ಈ ಸ್ಟಾಕ್​ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಬಿಎಸ್ಇ ಮತ್ತು ಎನ್ಎಸ್ಇ ಸ್ಟಾಕ್​ ಎಕ್ಸ್​ಚೇಂಜ್​ಗಳು ಈ ಕಂಪನಿಯ ಷೇರುಗಳನ್ನು ದೀರ್ಘಾವಧಿಯ ASM (ಹೆಚ್ಚುವರಿ ಕಣ್ಗಾವಲು ಕ್ರಮಗಳು) ರಚನೆಯ ಅಡಿಯಲ್ಲಿ ಇರಿಸಿವೆ. ಷೇರು ಬೆಲೆಗಳಲ್ಲಿನ ಏರಿಳಿತಗಳ ಬಗ್ಗೆ ಹೂಡಿಕೆದಾರರನ್ನು ರಕ್ಷಿಸಲು, ಷೇರು ವಿನಿಮಯ ಕೇಂದ್ರಗಳು ಷೇರುಗಳನ್ನು ಅಲ್ಪಾವಧಿಯ ಅಥವಾ ದೀರ್ಘಾವಧಿಯ ಎಎಸ್​ಎಂ ರಚನೆಯಲ್ಲಿ ಇರಿಸುತ್ತವೆ.

ಈ ಷೇರು ಕಳೆದ 3 ವರ್ಷಗಳಲ್ಲಿ 16,827.51% ಏರಿಕೆಯನ್ನು ದಾಖಲಿಸಿದೆ. 3 ವರ್ಷಗಳ ಹಿಂದೆ ಈ ಷೇರಿನಲ್ಲಿ ಯಾರಾದರೂ 1 ಲಕ್ಷ ರೂ. ಹಣ ತೊಡಗಿಸಿ ಇದುವರೆಗೂ ಕಾಯ್ದಿಟ್ಟುಕೊಂಡಿದ್ದರೆ, ಆ ಮೊತ್ತವು ಈಗ 1.68 ಕೋಟಿ ರೂಪಾಯಿ ಆಗುತ್ತಿತ್ತು. ಈ ಷೇರು ಬೆಲೆ ಒಂದು ವರ್ಷದಲ್ಲಿ 1,032.29% ಮತ್ತು ಕಳೆದ 3 ತಿಂಗಳಲ್ಲಿ 314.41% ಏರಿಕೆಯಾಗಿದೆ.

ದಿನನಿತ್ಯದ ಚಾರ್ಟ್‌ನಲ್ಲಿ ವಾರೀ ರಿನ್ಯೂವಬಲ್‌ನ ಸ್ಟಾಕ್ ಇನ್ನೂ ಪ್ರಬಲವಾಗಿದೆ ಎಂದು ರೆಲಿಗೇರ್ ಬ್ರೋಕಿಂಗ್‌ನ ರವಿ ಸಿಂಗ್ ಹೇಳಿದ್ದಾರೆ. ಅಲ್ಪಾವಧಿಗೆ 2150 ರೂ.ಗಳ ಗುರಿ ಬೆಲೆಯನ್ನು ಈ ಬ್ರೋಕರೇಜ್​ ಸಂಸ್ಥೆ ನಿಗದಿಪಡಿಸಿದೆ. ಸ್ಟಾಪ್ ಲಾಸ್ ಅನ್ನು 2000 ರೂ.ನಲ್ಲಿ ಇರಿಸಲು ಸಲಹೆ ನೀಡಿದೆ.

ಡಿಸೆಂಬರ್ 2023 ರ ಹೊತ್ತಿಗೆ, ಈ ಸ್ಮಾಲ್-ಕ್ಯಾಪ್ ವಿದ್ಯುತ್​ ಉತ್ಪಾದಕ ಕಂಪನಿಯಲ್ಲಿ ಪ್ರವರ್ತಕರು ಶೇಕಡಾ 74.46 ಪಾಲನ್ನು ಹೊಂದಿದ್ದಾರೆ. ಅಂತೆಯೇ, ಸಾರ್ವಜನಿಕ ಷೇರುಗಳು ಶೇಕಡಾ 25.54 ರಷ್ಟಿವೆ. ಕಂಪನಿಯು ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಷೇರುದಾರರ ಮಾದರಿಯ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net