ಖಾತಾ ವರ್ಗಾವಣೆಗೆ 1 ಲಕ್ಷ ಲಂಚಕ್ಕೆ ಬೇಡಿಕೆ; ಲೋಕಾ ಬಲೆಗೆ ಪಾಲಿಕೆ ಎಫ್ ಡಿಎ, ಡೇಟಾ ಎಂಟ್ರಿ ಆಪರೇಟರ್

loka
Published on

ಬೆಂಗಳೂರು : ಸ್ಥಿರಾಸ್ತಿ ಖಾತಾ ವರ್ಗಾವಣೆಗೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆವೊಡ್ಡಿದ್ದ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಸಿಲುಕಿದ್ದಾರೆ.

ಜಯನಗರ ವಾರ್ಡ್-166 ಕಚೇರಿ ಎಫ್ ಡಿಎ ರಾಘವೇಂದ್ರ ಮತ್ತು ಡಾಟಾ ಎಂಟ್ರಿ ಆಪರೇಟರ್ ಸುರೇಶ್ ಬಂಧಿತರು. ರೆವಿನ್ಯೂ ಇನ್‌ಸ್ಪೆಕ್ಟರ್ ರಾಜಗೋಪಾಲ್, ಪರಾರಿ ಆಗಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಜಯನಗರ ವಾರ್ಡ್-166ರಲ್ಲಿನ ಸ್ಥಿರಾಸ್ತಿಖಾತಾ ವರ್ಗಾವಣೆಗೆ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಖಾತಾ ವರ್ಗಾವಣೆಗೆ 1.25 ಲಕ್ಷ ರೂ. ಲಂಚಕ್ಕೆ ಬೇಡಿಕೆವೊಡ್ಡಿದ್ದರು. ಕೊನೆಗೆ ಇಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಾಗ 1 ಲಕ್ಷ ರೂ.ಗೆ ಅಧಿಕಾರಿಗಳು ಒಪ್ಪಿಕೊಂಡಿದ್ದರು.

ಬುಧವಾರ ಸಂಜೆ ಜಯನಗರ 25ನೇ ಕ್ರಾಸ್ ಗಣಪತಿ ದೇವಸ್ಥಾನ ಸಮೀಪದಲ್ಲಿ ದೂರುದಾರರಿಂದ ಲಂಚ ಪಡೆಯುತ್ತಿದ್ದಾಗ ರಾಘವೇಂದ್ರ ಮತ್ತು ಸುರೇಶ್ ರೆಡ್‌ಹ್ಯಾಂಡ್ ಆಗಿ ಸೆರೆಸಿಕ್ಕಿದ್ದಾರೆ. ಬಂಧಿತರ ವಿರುದ್ಧ ಭ್ರಷ್ಟಾಚಾರ ತಡೆಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net