ಒಂದೇ ದಿನ 15 ಲಕ್ಷ ಕುಟುಂಬಗಳ ಸಮೀಕ್ಷೆ | Census record

Centre-Confirms-Caste-Census-to.jpg
Published on

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ)ಯು ವೇಗ ಪಡೆದುಕೊಂಡಿದ್ದು, ಮಂಗಳವಾರ ಒಂದೇ ದಿನ 15.23 ಲಕ್ಷ ಕುಟುಂಬಗಳ ಮಾಹಿತಿ ಸಂಗ್ರಹದ ದಾಖಲೆ ಸೃಷ್ಟಿಯಾಗಿದೆ.

ದಿನದ ಗುರಿ 11.85 ಲಕ್ಷ ಕುಟುಂಬಗಳ ಸಮೀಕ್ಷೆಯಾಗಿತ್ತು. ಗುರಿ ಮೀರಿದ ಪ್ರಗತಿಯಾಗಿದ್ದು, ಈ ಪ್ರಕ್ರಿಯೆ ಶುರುವಾದ ಒಂಭತ್ತನೇ ದಿನಕ್ಕೆ ಗಮನಸೆಳೆಯುವ ಪ್ರಯತ್ನವಾಗಿದೆ. ಒಟ್ಟಾರೆ 1.43 ಕೋಟಿ ಕುಟುಂಬಗಳ ಸಮೀಕ್ಷೆ ಗುರಿ ಪೈಕಿ ಈವರೆಗೆ 56.73 ಲಕ್ಷ ಕುಟುಂಬಗಳ ಸಮೀಕ್ಷೆಯಾಗಿದೆ.

ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳ ನಿರಂತರ ಪರಿಶೀಲನೆ, ಮೇಲ್ವಿಚಾರಣೆ, ಗಣತಿದಾರರ ಪರಿಶ್ರಮವು ಎದ್ದು ಕಾಣುತ್ತಿದೆ. ತಾಂತ್ರಿಕ ಸಮಸ್ಯೆ, ನೆಟ್‌ವರ್ಕ್ ಅಡಚಣೆ ಸಂಪೂರ್ಣ ಬಗೆಹರಿದರೆ ಶರವೇಗದಲ್ಲಿ ಸಾಗಲಿದೆ ಎಂದು ಗಣತಿದಾರರು, ಮೇಲ್ವಿಚಾರಕರು ಹೇಳುತ್ತಾರೆ.

ಅ.2ರಂದು ವಿನಾಯಿತಿಗೆ ಮೊರೆ

ನಾಡಿನಾದ್ಯಂತ ಅ.2ರಂದು ಸರ್ಕಾರಿ ನೌಕರರು ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿದ್ದು, ಅವತ್ತೊಂದು ದಿನ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಸಂಘದ ಅಧ್ಯಕ್ಷ ಕೆ.ಎಸ್.ಷಡಾಕ್ಷರಿ ಈ ಕುರಿತು ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಸಮೀಕ್ಷಾ ತರಬೇತಿ ದಿನಾಂಕವನ್ನು ಅ.2ರ ಬದಲಿಗೆ ಬೇರೆ ದಿನಾಂಕಗಳಲ್ಲಿ ಆಯೋಜಿಸಬೇಕು. ರಾಜ್ಯದ ಉಳಿದೆಡೆ ಅ.2ರಂದು ಸಮೀಕ್ಷಾ ಕಾರ್ಯದಿಂದ ಎಲ್ಲ ಸರ್ಕಾರಿ ನೌಕರರು/ ಶಿಕ್ಷಕರಿಗೆ ವಿನಾಯಿತಿ ನೀಡಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net