

ಬೆಂಗಳೂರು : ಮಾಲೀಕರ ಮನೆಯಲ್ಲಿ 1.30 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಬಾಣಸಿಗನನ್ನು ಜೆ.ಪಿ.ನಗರ ಪೊಲೀಸರು ಚಾಣಾಕ್ಷತನದಿಂದ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಕೈಲಾಸ್ ದಾಸ್(35) ಬಂಧಿತ. ಕಳವು ಮಾಡಿದ್ದ 1.3 ಕೋಟಿ ರೂ. ಮೌಲ್ಯದ ವಜ್ರದ ಹರಳು, 1.7 ಕೆ.ಜಿ. ಚಿನ್ನಾಭರಣ, ಎರಡೂವರೆ ಕೆಜಿಯ ಬೆಳ್ಳಿ ಕಾಮಧೇನು ವಿಗ್ರಹ, 8.5 ಲಕ್ಷ ನಗದು, 3 ಪಾಸ್‌ಪೋರ್ಟ್, ದುಬಾರಿ ಬೆಲೆಯ 2 ಕೈಗಡಿಯಾರಗಳನ್ನು ವಶಕ್ಕೆ ಪಡೆದಿರುವುದಾಗಿ ದಕ್ಷಿಣ ವಿಭಾಗ ಡಿಸಿಪಿ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ಜೆ.ಪಿ.ನಗರ 3ನೇ ಹಂತ 9ನೇ ಅಡ್ಡರಸ್ತೆಯ ರಾಜೇಶ್ ಬಾಬು ಎಂಬುವರ ಮನೆಯಲ್ಲಿ ಆರೋಪಿ ಕೈಲಾಸ್, 6 ವರ್ಷಗಳಿಂದ ಬಾಣಸಿಗನಾಗಿದ್ದ. ಮಾಲೀಕರ ವಿಶ್ವಾಸ ಗಳಿಸಿದ್ದ ಕೈಲಾಸ್‌ಗೆ ಮನೆಯ ನೆಲಮಹಡಿಯಲ್ಲಿ ವಾಸಕ್ಕೆ ಕೊಠಡಿ ಕೊಟ್ಟಿದ್ದರು. ಜತೆಗೆ ಮನೆಯಲ್ಲಿ ಎಲ್ಲ ಕಡೆ ಓಡಾಡಲು ಅವಕಾಶ ನೀಡಿದ್ದರು. ಇತ್ತೀಚೆಗೆ ರಾಜೇಶ್ ಕುಟುಂಬ ಸದಸ್ಯರಿಗೆ ಕೋವಿಡ್-19 ದೃಢವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕಿತರ ಆರೈಕೆ ಕಡೆ ಇತರ ಕುಟುಂಬ ಸದಸ್ಯರು ಗಮನಹರಿಸಿದ್ದರು. ಇತ್ತ ಮನೆಯಲ್ಲಿದ್ದ ಕೈಲಾಸ್, ಅ.9ರ ರಾತ್ರಿ ಮಾಲೀಕರ ಬೆಡ್ ರೂಮ್‌ಗೆ ತೆರಳಿ ಡಿಜಿಟಲ್ ಲಾಕರ್ ತೆರೆಯಲು ಯತ್ನಿಸಿದ್ದ. ಕೊನೆಗೆ ಲಾಕರನ್ನು ಕದ್ದು ತನ್ನ ಕೊಠಡಿಯಲ್ಲಿ ಇಟ್ಟುಕೊಂಡಿದ್ದ. ಅ.10ರ ಬೆಳಗ್ಗೆ ಮಾಲೀಕರಿಗೆ ತಿಳಿಸದೆ ಲಾಕರ್ ಜತೆ ಪರಾರಿಯಾಗಿದ್ದ.
ಏಳೆಂಟು ಗಂಟೆಗಳ ಕಾಲ ಬಾಣಸಿಗ ಕಾಣದೆ ಇದ್ದಾಗ ಅನುಮಾನ ಬಂದು ಮಾಲೀಕರು ಮನೆ ಪರಿಶೀಲನೆ ನಡೆಸಿದಾಗ ಲಾಕರ್ ಕಳವಾಗಿರುವುದು ಗೊತ್ತಾಗಿದೆ. ಈ ಕುರಿತು ಜೆ.ಪಿ.ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಆರೋಪಿ ಬಂಧನಕ್ಕೆ ಬಲೆಬೀಸಿತ್ತು.
ಪೊಲೀಸರ ತನಿಖೆ ದಿಕ್ಕು ತಪ್ಪಿಸುವ ಸಲುವಾಗಿ ಕೈಲಾಸ್, ಲಾಕರ್‌ನೊಂದಿಗೆ ಬಸ್‌ನಲ್ಲಿ ಮೈಸೂರು ನಗರಕ್ಕೆ ತೆರಳಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. 2 ದಿನ ಸ್ಕ್ರೂ ಡ್ರೈವರ್‌ಗಳಿಂದ ಡಿಜಿಟಲ್ ಲಾಕರ್ ತೆರೆಯಲು ಯತ್ನಿಸಿದ್ದ. ಸ್ಕ್ರೂ ಡ್ರೈವರ್ ಮುರಿದರೂ ಲಾಕರ್ ಮಾತ್ರ ತೆರೆಯಲು ಸಾಧ್ಯವಾಗಿರಲಿಲ್ಲ. ಕೊನೆಗೆ ಊರಿಗೆ ಹೋಗಲು ನಿರ್ಧರಿಸಿ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಯಶವಂತಪುರ ರೈಲು ನಿಲ್ದಾಣದಿಂದ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದ. ಆರೋಪಿ ಹೌರಾ ರೈಲು ನಿಲ್ದಾಣಕ್ಕೆ ತಲುಪುವ ಮೊದಲೇ ಪೊಲೀಸರು ವಿಮಾನದಲ್ಲಿ ಹೌರಾಗೆ ಹೋಗಿ ಬಂಧನಕ್ಕೆ ಸಜ್ಜಾಗಿದ್ದರು. ಆಗಲೂ ಕೈಲಾಸ್, ಪೊಲೀಸರ ಕಣ್ಣು ತಪ್ಪಿಸಿ ರೈಲು ನಿಲ್ದಾಣದಲ್ಲಿ ಬೇರೆ ಪ್ಲಾಟ್ ಫಾರ್ಮ್‌ನಿಂದ ಪರಾರಿಯಾಗಲು ಮುಂದಾಗಿದ್ದ. ಅದನ್ನು ಅರಿತ ಪೊಲೀಸರು ಆತನ್ನು ಸುತ್ತುವರಿದು ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಚಾಣಾಕ್ಷತನ ತೋರಿದ ಖಾಕಿ :
1.3 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದ ಲಾಕರ್ ಕದ್ದಿದ್ದ ಕೈಲಾಸ್, ಮೊಬೈಲ್ ಆ್ ಮಾಡಿಕೊಂಡಿದ್ದ. ಊರಿಗೆ ಹೋಗದೆ ಮೈಸೂರು ತಲುಪಿದ್ದ. ಒಂದು ಹೆಜ್ಜೆ ಮುಂದಿಟ್ಟ ಪೊಲೀಸರು, ಕೈಲಾಸ್ ಪತ್ನಿ ಮೊಬೈಲ್‌ಗೆ ಬರುವ ಒಳ-ಹೊರ ಕರೆಗಳ ಮೇಲೆ ನಿಗಾ ವಹಿಸಿದ್ದರು. ಕೈಲಾಸ್ ಅಪರಿಚಿತ ವ್ಯಕ್ತಿಗಳ ಮೊಬೈಲ್ ಪಡೆದು ಕರೆ ಮಾಡುತ್ತಿರುವುದು ದೃಢವಾಗಿತ್ತು. ಕರೆಗಳ ಸಿಗ್ನಲ್ ಆಧರಿಸಿ ಆರೋಪಿ ಬೆನ್ನತ್ತಿದ್ದರು. ಅಷ್ಟೊತ್ತಿಗೆ ಕೈಲಾಸ್, ಊರಿಗೆ ಹೋಗಲು ನಿರ್ಧರಿಸಿ ರೈಲು ಏರಿದ್ದ. ಜತೆಗೆ ರೈಲ್ವೆ ಟಿಟಿ ಮೊಬೈಲ್ ಬಳಸಿದ್ದ. ಅದನ್ನು ತಿಳಿದ ಪೊಲೀಸರು, ರೈಲ್ವೆ ಟಿಟಿಯನ್ನು ಸಂಪರ್ಕಿಸಿ ಕೈಲಾಸ್ ಇರುವುದನ್ನು ಖಚಿತ ಪಡಿಸಿಕೊಂಡು ವಿಮಾನದಲ್ಲಿ ಹೌರ ರೈಲು ನಿಲ್ದಾಣಕ್ಕೆ ಮೊದಲೇ ಹೋಗಿದ್ದರು. ರೈಲ್ವೆ ಟಿಟಿಇ ಆರೋಪಿ ಮೇಲೆ ನಿಗಾವಹಿಸಿ ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಲೆಗೆ ಕೆಡವಿದ್ದಾರೆ.
ಅನ್‌ಲಾಕ್ ಕೀ ಒಳಗಿತ್ತು :
ಅತ್ಯಾಧುನಿಕ ಡಿಜಿಟಲ್ ಲಾಕರ್‌ನ್ನು ತೆರೆಯಲು ಕೈಲಾಸ್ ಎಷ್ಟೇ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಅನ್‌ಲಾಕ್ ಕೀಯನ್ನು ಮಾಲೀಕರು ಒಳಗಿಟ್ಟು ಡಿಜಿಟಲ್ ಲಾಕ್ ಮಾಡಿದ್ದರು. ಕೊನೆಗೆ ಮಾಲೀಕರೇ ಪಾಸ್‌ವರ್ಡ್ ಒತ್ತಿ ತೆಗೆಯಬೇಕಾಗಿತ್ತು.