ಶ್ರೀಲಂಕಾ, ಯುಎಇ ಬಳಿಕ ಐಪಿಎಲ್​ ಆತಿಥ್ಯಕ್ಕೆ ಮುಂದೆ ಬಂದ ನ್ಯೂಜಿಲೆಂಡ್​

ipl
Published on

ನವದೆಹಲಿ: ಭಾರತದಲ್ಲಿ ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆ ಈಗಾಗಲೆ ಶ್ರೀಲಂಕಾ ಮತ್ತು ಯುಎಇ ದೇಶಗಳಿಂದ ಐಪಿಎಲ್​ ಟೂರ್ನಿಯ ಆತಿಥ್ಯಕ್ಕೆ ಆಫರ್​ಗಳು ಬಂದಿದ್ದವು. ಇದೀಗ ಕರೊನಾ ಭೀತಿಯನ್ನು ಬಹುತೇಕ ನಿವಾರಿಸಿಕೊಂಡಿರುವ ನ್ಯೂಜಿಲೆಂಡ್​ ಕೂಡ ಐಪಿಎಲ್​ ಆತಿಥ್ಯಕ್ಕೆ ಮುಂದೆ ಬಂದಿದೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಐಪಿಎಲ್​ ಟೂರ್ನಿಯನ್ನು ಸೆಪ್ಟೆಂಬರ್​ನಿಂದ ನವೆಂಬರ್​ ನಡುವೆ ಆಯೋಜಿಸಲು ಬಿಸಿಸಿಐ ಈಗಾಗಲೆ ಚಿಂತನೆ ನಡೆಸಿದ್ದು, ಭಾರತದಲ್ಲಿ ನಡೆಸುವುದೇ ಮೊದಲ ಆದ್ಯತೆಯಾಗಿರುತ್ತದೆ. ಆದರೆ ಭಾರತದಲ್ಲಿ ನಡೆಸುವುದು ಸಾಧ್ಯವಾಗದಿದ್ದರೆ ವಿದೇಶದಲ್ಲೂ ಟೂರ್ನಿ ಆಯೋಜಿಸಲು ಸಿದ್ಧ ಎಂದು ಬಿಸಿಸಿಐ ಈಗಾಗಲೆ ತಿಳಿಸಿದೆ. ಶೀಘ್ರದಲ್ಲೇ ಐಪಿಎಲ್​ ಆಡಳಿತ ಮಂಡಳಿ ಸಭೆ ಸೇರಲಿದ್ದು, ಟೂರ್ನಿ ಭವಿಷ್ಯ ಮತ್ತು ಚೀನಾ ಪ್ರಾಯೋಜಕತ್ವದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

'ಭಾರತದಲ್ಲಿ ಟೂರ್ನಿ ಆಯೋಜಿಸುವುದಕ್ಕೆ ನಮ್ಮ ಮೊದಲ ಆದ್ಯತೆ. ಆದರೆ ಭಾರತದಲ್ಲಿ ಟೂರ್ನಿ ನಡೆಸುವುದು ಸುರಕ್ಷಿತವಲ್ಲ ಎನಿಸಿದರೆ, ಆಗ ವಿದೇಶಿ ಆಯ್ಕೆಗಳ ಪರಿಶೀಲಿಸುತ್ತೇವೆ. ಶ್ರೀಲಂಕಾ, ಯುಎಇ ಬಳಿಕ ನಮಗೆ ನ್ಯೂಜಿಲೆಂಡ್​ನಿಂದಲೂ ಆಹ್ವಾನ ಬಂದಿದೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಐಪಿಎಲ್​ ಈ ಹಿಂದೆ 2 ಬಾರಿ ಸಾರ್ವತ್ರಿಕ ಚುನಾವಣೆಯಿಂದಾಗಿ ವಿದೇಶದಲ್ಲಿ ಆಯೋಜನೆಗೊಂಡಿದೆ. 2009ರಲ್ಲಿ ಸಂಪೂರ್ಣ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದರೆ, 2014ರಲ್ಲಿ ಟೂರ್ನಿಯ ಮೊದಲ ಭಾಗ ಯುಎಇಯಲ್ಲಿ ನಡೆದಿತ್ತು.

ನ್ಯೂಜಿಲೆಂಡ್​ನಲ್ಲಿ ಇದುವರೆಗೆ ಒಂದೂವರೆ ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ದಾಖಲಾಗಿದ್ದರೂ, ಮಂಗಳವಾರದ ವೇಳೆ ಸಕ್ರಿಯ ಪ್ರಕರಣದ ಸಂಖ್ಯೆ ಕೇವಲ 1. ಕಳೆದ ತಿಂಗಳು ಹಲವು ದಿನಗಳ ಕಾಲ ಒಂದೂ ಪ್ರಕರಣ ದಾಖಲಾಗಿರಲಿಲ್ಲ. ಇತ್ತ ಭಾರತದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆ ಕಾಣುತ್ತಿದ್ದು, ಒಟ್ಟಾರೆ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಈಗ ವಿಶ್ವದಲ್ಲಿಯೇ 3ನೇ ಸ್ಥಾನಕ್ಕೆ ಏರಿದೆ.

ಕಾಲಮಾನ ಹೊಂದಾಣಿಕೆ ಕಷ್ಟ

ಐಪಿಎಲ್​ ಆತಿಥ್ಯಕ್ಕೆ ನ್ಯೂಜಿಲೆಂಡ್​ ಆಹ್ವಾನ ನೀಡಿದ್ದರೂ, ಉಭಯ ದೇಶಗಳ ನಡುವಿನ ಕಾಲಮಾನದ ಅಂತರದಿಂದಾಗಿ ಟೂರ್ನಿ ಆಯೋಜಿಸುವುದು ಕಷ್ಟಸಾಧ್ಯವೆನಿಸಿದೆ. ನ್ಯೂಜಿಲೆಂಡ್​ಗಿಂತ ಭಾರತ ಏಳೂವರೆ ಗಂಟೆ ಮುಂದಿದೆ. ಒಂದು ವೇಳೆ ನ್ಯೂಜಿಲೆಂಡ್​ನಲ್ಲಿ ರಾತ್ರಿ 9 ಗಂಟೆಯ ವೇಳೆ ಪಂದ್ಯ ಆರಂಭಗೊಂಡರೂ, ಭಾರತದಲ್ಲಿ ಆಗ ಸಂಜೆ 4.30 ಆಗಿರುತ್ತದೆ. ಅಷ್ಟು ಬೇಗನೆ ಐಪಿಎಲ್​ ಪಂದ್ಯ ಆಯೋಜನೆಗೊಂಡರೆ, ಕಚೇರಿಗೆ ತೆರಳುವ ಅಥವಾ ಮನೆಯಿಂದಲೇ ಕೆಲಸ ನಿರ್ವಹಿಸುವ ಕ್ರಿಕೆಟ್​ ಪ್ರೇಮಿಗಳು ಪಂದ್ಯ ವೀಕ್ಷಿಸುವುದು ಕಷ್ಟಕರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net