

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಭಯೋತ್ಪಾದನಾ ಚಟುವಟಿಕೆ ನಡೆಯುವ ಶಂಕೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಅವಧಿಯಲ್ಲಿ ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ ನಮ್ಮ ಕಣ್ಣ ಮುಂದೆ ಇರುವುದರಿಂದ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ನಗರ ಪೊಲೀಸರು ಬಹಳ ಎಚ್ಚರಿಕೆಯಂದ ಇರುವಂತೆ ಸೂಚಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳಿಂದ ಇದುವರೆಗೂ ತಮಗೆ ಯಾವುದೇ ಎಚ್ಚರಿಕೆ ಸಂದೇಶ ಬಂದಿಲ್ಲ. ಆದರೂ ನಗರದಲ್ಲಿ ಸೂಕ್ತ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು.
ವಿಶೇಷ ಕಾರ್ಯಾಚರಣೆ:
ಹೊಟೇಲ್, ಬಾರ್ ಹಾಗೂ ಪಬ್ಗಳಿಗೆ ನಾವು ಸುರಕ್ಷೆಗೆ ಸಂಬಂಧಿಸಿದ ಸೂಚನೆಗಳನ್ನು ನೀಡಲಾಗಿದೆ. ಎಲ್ಲರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೆಲ ಹೋಟೆಲ್ಗಳು ನಿಯಮ ಉಲ್ಲಂಘಿಸಿದ ಘಟನೆಗಳು ಬೆಳಕಿಗೆ ಬಂದಿದ್ದು ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ್ದೇವೆ. ಅವಧಿ ಮೀರಿ ವಹಿವಾಟು ನಡೆಸುತ್ತಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಪಶ್ಚಿಮ ವಿಭಾಗದಲ್ಲಿ ೧೫೦ ಹೋಟೆಲ್‌ಗಳನ್ನು ಪರಿಶೀಲಿಸಿ ಅದರಲ್ಲಿ ೨೭ ಹೋಟೆಲ್‌ಗಳ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ಪೊಲೀಸ್ ಇಲಾಖೆಯ ನಿಯಮ ಉಲ್ಲಂಘಿಸಿ ಲೇಡಿಸ್ ಬಾರ್‌ಗಳಲ್ಲಿ ಯುವತಿಯರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ದೂರುಗಳು ಬಂದಿವೆ. ಅವರ ವಿರುದ್ಧವು ಸಹ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.