

ಬೆಂಗಳೂರು: ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗಿದ್ದು, ರಾಜಧಾನಿಯ ಮೂಲೆ ಮೂಲೆಯಲ್ಲೂ ಪೊಲೀಸರ ಕಣ್ಗಾವಲಿದೆ. ಕಹಿನೆನಪುಗಳನ್ನು ಮರೆತು ಹೊಸ ಉತ್ಸಾಹದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಾಗರಿಕರು ಮುಂದಾಗಿದ್ದಾರೆ. ಮತ್ತೊಂದೆಡೆ ಹೋಟೆಲ್, ಪಬ್, ಪಾರ್ಟಿ ಹಾಲ್ಗಳಲ್ಲಿ ವಿಶೇಷ ಆಫರ್ಗಳಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಮುಖ್ಯವಾಗಿ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ ರೋಡ್ನಲ್ಲಿ ನಾಲ್ವರು ಡಿಸಿಪಿ ನೇತೃತ್ವದಲ್ಲಿ ಭಧ್ರತೆ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಶನಿವಾರ ಮಧ್ಯಾಹ್ನ 3ರಿಂದ ರಾತ್ರಿ 1 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಜನರಿಗೆ ಏಕಮುಖ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 2 ರಸ್ತೆಗಳ ಜಂಕ್ಷನ್ನಲ್ಲಿ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಉಪಕರಣವನ್ನು ಅಳವಡಿಸಲಾಗಿದೆ. ಬ್ರಿಗೇಡ್ ರಸ್ತೆಯಿಂದ ನಿರ್ಗಮಿಸುವವರು ಅಪೇರಾ ಜಂಕ್ಷನ್ನಲ್ಲಿ ಹೊಗಬಹುದು.
ಮಹಿಳೆಯರ ಸುರಕ್ಷತೆಗೆ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ. ತುರ್ತು ಸಂದರ್ಭದಲ್ಲಿ ಮಹಿಳೆಯರು ಈ ಸೌಲಭ್ಯ ಬಳಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಪೊಲೀಸರು ಸಲಹೆ ನೀಡಿದ್ದಾರೆ. ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶವಿದೆ. ಅವಧಿ ಮೀರಿದ್ರೆ ಪೊಲೀಸರು ಕಠಿಣ ಕ್ರಮ ಜರುಗಿಸಲಿದ್ದಾರೆ.
ಪಂಚತಾರಾ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಕ್ಲಬ್ಗಳು ಸೇರಿ ವರ್ಷಾಚರಣೆಗೆ ವಿವಿಧ ಕಾರ್ಯಕ್ರಮ ಆಯೋಜಿಸಿರುವ ಸಂಬಂಧಪಟ್ಟವರಿಗೆ ಮುಂಜಾಗ್ರತೆ ವಹಿಸುವಂತೆ ಪೊಲೀಸರು ಖಡಕ್ ಸೂಚಿಸಿದ್ದಾರೆ. ಪ್ರಮುಖ ಸ್ಥಳಗಳಾದ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಕೋರಮಂಗಲ, ಇಂದಿರಾನಗರ ಹಾಗೂ ವೈಟ್ಫೀಲ್ಡ್ಗಳಲ್ಲಿ ಜನ ಸಮೂಹ ನಿಯಂತ್ರಣಕ್ಕೆ ಭದ್ರತೆ, ತಪಾಸಣಾ ವ್ಯವಸ್ಥೆ ಮಾಡಲಾಗಿದೆ. ವಾಚ್ ಟವರ್ ನಿರ್ಮಿಸಿ ಬೈನಾಕುಲರ್ ಉಪಕರಣಗಳಲ್ಲಿ ಪೊಲೀಸರು ಬಳಸಲಿದ್ದಾರೆ.
ಭದ್ರತೆ ಸಲುವಾಗಿ ಹೆಚ್ಚುವರಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿ ಕೆಲವು ಕಡೆ ಶನಿವಾರ ರಾತ್ರಿ 20 ಡ್ರೋನ್ ಕ್ಯಾಮರಾಗಳಿಂದಲೂ ನಿಗಾ ವಹಿಸಲಾಗುತ್ತದೆ. ಪ್ರಮುಖ ಸ್ಥಗಳಲ್ಲಿ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳಗಳಿಂದ ತಪಾಸಣೆ ನಡೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
10 ಸಾವಿರ ಪೊಲೀಸ್: ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 15 ಡಿಸಿಪಿ, 45 ಎಸಿಪಿ, 160 ಪಿಐ, 600 ಪಿಎಸ್ಐ, 800 ಎಎಸ್ಐ, 1800 ಎಚ್ಸಿ ಹಾಗೂ 5200 ಕಾನ್ಸ್ಟೆಬಲ್ಗಳು ಸೇರಿ ಒಟ್ಟು 8624 ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಗರದ ಪೊಲೀಸರ ಜೊತೆ ಹೊರ ಜಿಲ್ಲೆಗಳು ಹಾಗೂ ತರಬೇತಿಯಲ್ಲಿರುವ 20 ಎಸಿಪಿ, 50 ಪಿಐ, 50 ಪಿಎಸ್ಐ ಮತ್ತು 1300 ಪೊಲೀಸರ ಸಹ ನಿಯುಕ್ತಗೊಂಡಿದ್ದಾರೆ. 52 ಕೆಎಸ್ಆರ್ಪಿ ಹಾಗೂ 25 ಸಿಎಆರ್ ತುಕಡಿಗಳನ್ನು ಭದ್ರತೆಗೆ ಬಳಸಲಾಗಿದೆ. ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ರಿಚ್ಮಂಡ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 4 ಡಿಸಿಪಿ, 10 ಎಸಿಪಿ, 30 ಪಿಐಗಳು ಸೇರಿ 3 ಸಾವಿರ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ. ಕೋರಮಂಗಲ, ಇಂದಿರಾನಗರ ಮತ್ತು ವೈಟ್ಫೀಲ್ಡ್ ಪ್ರದೇಶಗಳಲ್ಲಿ 4 ಡಿಸಿಪಿ, 10 ಎಸಿಪಿ, 25 ಪಿಐ ಸೇರಿದಂತೆ 2500 ಪೊಲೀಸರಿಗೆ ಭದ್ರತೆ ಜವಾಬ್ದಾರಿ ವಹಿಸಲಾಗುತ್ತಿದೆ.
112ಕ್ಕೆ ಕರೆ ಮಾಡಿ: ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಕಿಡಿಗೇಡಿಗಳ, ಶಂಕಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭ್ಯವಾದರೆ ಪೊಲೀಸ್ ನಿಯಂತ್ರಣ ಕೊಠಡಿ 112ಗೆ ಕರೆ ಮಾಡಿ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್: ನಾಗರಿಕರ ಹಿತದೃಷ್ಟಿಯಿಂದ ಶನಿವಾರ ರಾತ್ರಿ 9ರಿಂದ ಭಾನುವಾರ ಬೆಳಗ್ಗೆ 6 ಗಂಟೆವರೆಗೆ ನಗರದ ಎಲ್ಲ ಮೇಲ್ಸೇತುವೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 10 ರಿಂದಲೇ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಯಲಿದೆ. ವೀಲ್ಹಿಂಗ್, ಅತಿವೇಗದ ಚಾಲನೆ ಮಾಡುವವರ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ಎಂದು ವಿಶೇಷ ಆಯುಕ್ತ (ಸಂಚಾರ) ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.