

ವಿಜಯವಾಣಿಜ ಸುದ್ದಿಜಾಲ ಕುಂದಾಪುರ
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುತ್ತಿರುವ ಹೊತ್ತಲ್ಲೇ, ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶವೊಂದರ ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸಲು ದಾನಿಗಳ ಸಹಾಯದಿಂದ ಹಳೇ ವಿದ್ಯಾರ್ಥಿ ಸಂಘ ಹಾಗೂ ಊರಿನವರು ಕೈ ಜೋಡಿಸಿದ್ದಾರೆ.
1929ರಲ್ಲಿ ಕುಂದಾಪುರ ತಾಲೂಕಿನ, ಬೈಂದೂರು ವಲಯದ ಕುಂದಬಾರಂದಾಡಿಯಲ್ಲಿ ಸ್ಥಾಪಿತವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2029ರಲ್ಲಿ ಶತಮಾನದ ಸಂಭ್ರಮಾಚರಣೆ ನಡೆಯಲಿದೆ. ಕುಂದಬಾರಂದಾಡಿ ಪರಿಸರದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಭವಿಷ್ಯ ರೂಪಿಸಿರುವ ಈ ಶಾಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು.
ಶಾಲೆ ಉಳಿವಿಗೆ ಕಾರ್ಯ ಯೋಜನೆ: ಶತಮಾನೋತ್ಸವದ ಹೊಸ್ತಿಲಲ್ಲಿ ನಿಂತಿರುವ ನಮ್ಮೂರು ಶಾಲೆ ಯಾವುದೇ ಕಾರಣಕ್ಕೂ ಕಳೆ ಕುಂದಬಾರದು ಹಾಗೂ ಶತಮಾನದ ಇತಿಹಾಸವುಳ್ಳ ಈ ವಿದ್ಯಾ ದೇಗುಲ ಮುಚ್ಚಬಾರದೆಂದು ನಿಶ್ಚಯಿಸಿದ ಊರಿನವರು ಹಾಗೂ ಹಳೇ ವಿದ್ಯಾರ್ಥಿಗಳು ಈ ಶಾಲೆಯ ಉಳಿಯುವಿಕೆಗಾಗಿ ಕಾರ್ಯಯೋಜನೆ ರೂಪಿಸಿದ್ದರು. ಸ್ಥಳೀಯ ಪ್ರಮುಖರಾದ ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಕುಟುಂಬಸ್ಥರನ್ನು ಸಂಪರ್ಕಿಸಿ ಶಾಲೆಯನ್ನು ಉಳಿಸುವ ನಮ್ಮ ಕನಸುಗಳಿಗೆ ಜೊತೆಯಾಗುವಂತೆ ಒಕ್ಕೊರಲ ಮನವಿ ಮಾಡಿದ್ದರು.
ಸ್ಥಳೀಯ ವಿದ್ಯಾಭಿಮಾನಿಗಳ ಆಸೆಗಳಿಗೆ ಪ್ರೋತ್ಸಾಹದ ನೀರೆರೆದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ಬಿ.ಎನ್.ಶೆಟ್ಟಿ, ಕುಟುಂಬ ಸದಸ್ಯರನ್ನು ಒಟ್ಟು ಮಾಡಿ, ಶಾಲೆಯ ಅಭಿವೃದ್ಧಿಗೆ ನೆರವಾಗಲು ತಿಳಿಸಿದರು.
ಶಾಲೆಯ ಅಭಿವೃದ್ಧಿ ಯೋಜನೆ ರೂಪಿಸಿ, ಒಟ್ಟು ವೆಚ್ಚದ ಮೂರನೇ ಒಂದು ಪಾಲನ್ನು ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಕುಟುಂಬದಿಂದ ನೀಡಿದರು. ಸರ್ಕಾರದ ನಿಯಮಾನುಸಾರದಂತೆ ಒಟ್ಟು ವೆಚ್ಚದ ಮೂರನೇ ಒಂದು ಪಾಲನ್ನು ನೀಡಿದ್ದ ಕುಟುಂಬದ ಹಿರಿಯರಾದ ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಹೆಸರನ್ನು ಶಾಲೆಗೆ ಮರು ನಾಮಕರಣ ಮಾಡಲು ತೀರ್ಮಾನಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ದಾನಿಗಳು ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯ ಅಭ್ಯುದಯಕ್ಕೆ ಕಾರ್ಯ ಯೋಜನೆಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರದಿಂದ ಅನುಮತಿಯೂ ದೊರಕಿ, ಇದೀಗ ಶಾಲೆ ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಬಾರಂದಾಡಿ ಎನ್ನುವ ಹೆಸರಿನೊಂದಿಗೆ ಪುನಃ ನಾಮಕರಣಗೊಂಡು ಹೊಸ ಹುರುಪಿನೊಂದಿಗೆ ಶಿಕ್ಷಣ ಯಜ್ಞವನ್ನು ಆರಂಭಿಸಿದೆ.
ಆಂಗ್ಲ ಮಾಧ್ಯಮ ಆರಂಭ
ಸ್ಥಳೀಯ ಪಾಲಕರ ಬೇಡಿಕೆಗೆ ಪೂರಕವಾಗಿ ಈ ವರ್ಷದಿಂದಲೇ 1ಮತ್ತು 2ನೇ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿ ಆರಂಭಿಸಲಾಗಿದೆ. ಉತ್ತಮ ವಿದ್ಯಾರ್ಜನೆ ನೀಡಲು ಮೂವರು ಅತಿಥಿ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ. ತನ್ನೂರಿನ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ದೊರಕಿಸಲು ಇಡೀ ಊರು ಒಟ್ಟಾಗಿದೆ. ಪ್ರಸ್ತುತ ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಇದೆ. ಮೂವರು ಸರ್ಕಾರಿ ಶಿಕ್ಷಕರಿದ್ದು, ಮೂವರು ಗೌರವ ಶಿಕ್ಷಕರಿದ್ದಾರೆ. ಆಟದ ಮೈದಾನ, ಕ್ರೀಡಾ ತರಬೇತಿ, ಯೋಗ ತರಬೇತಿ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಕೌಶಲ ತರಬೇತಿಯಂತಹ ಹತ್ತಾರು ಯೋಜನೆಯ ಕನಸುಗಳು ಇಲ್ಲಿದೆ.
ಜಿಲ್ಲೆಗೆ ಮಾದರಿ ಶಾಲೆಯ ಕನಸು
2029ಕ್ಕೆ ಈ ಶಾಲೆ ಆರಂಭವಾಗಿ 100 ಸಂವತ್ಸರಗಳು ಪೂರ್ಣಗೊಳ್ಳುತ್ತವೆ. ಹೀಗಾಗಿ ಶತಮಾನೋತ್ಸವ ಸಂಭ್ರಮದ ವೇಳೆಗೆ ಜಿಲ್ಲೆಗೆ ಮಾದರಿ ಸರ್ಕಾರಿ ಶಾಲೆಯನ್ನಾಗಿಸುವ ಕನಸುಗಳೊಂದಿಗೆ, ದಾನಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳು ಒಟ್ಟಾಗಿ ಅಭಿವೃದ್ಧಿ ಯೋಜನೆಗಳ ಗುರಿಯನ್ನು ಇರಿಸಿಕೊಂಡಿದೆ. ಇದಕ್ಕೆ ಶಿಕ್ಷಕ - ರಕ್ಷಕ ಸಂಘ, ಸ್ಥಳೀಯ ಗೆಳೆಯರ ತಂಡಗಳು, ಹಕ್ಲಾಡಿ ಲಯನ್ಸ್ ಕ್ಲಬ್ ಸಾಥ್ ನೀಡುತ್ತಿದೆ.
ಈ ಶಾಲೆಯನ್ನು ಉಳಿಸಲು ಸ್ಥಳೀಯರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಸಿಂಗಾರಿ ಶಿವರಾಮ್ ಶೆಟ್ಟಿಯವರ ಕುಟುಂಬಸ್ಥರ ಸಹಕಾರವನ್ನು ಬಯಸಿದ್ದರು. ವಿದ್ಯಾ ದೇಗುಲವೊಂದರ ಉಳಿಯುವಿಕೆಗಾಗಿ ನಮ್ಮ ಕುಟುಂಬದಿಂದ ಆಗುವ ಸಹಕಾರ ನೀಡಲು ನಾವು ಬದ್ಧರಿದ್ದೇವೆ. ಶೋಭಾ ಬಿ.ಎನ್. ಶೆಟ್ಟಿ, ಶಾಲೆಯ ಪ್ರಧಾನ ಪೋಷಕರು. ಈ ಭಾಗದ ಸರ್ಕಾರಿ ಶಾಲೆಯಲ್ಲಿ ಉಳಿಸಲು ಸ್ಥಳೀಯರು, ದಾನಿಗಳು, ಹಳೇ ವಿದ್ಯಾರ್ಥಿಗಳು, ಪಾಲಕರು ಸಹಕಾರ ನೀಡುತ್ತಿದ್ದಾರೆ. ಶಿಕ್ಷಕರ ತಂಡ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಶಿವರಾಜ್ ಭಂಡಾರಿ ಎನ್., ಪ್ರಭಾರ ಮುಖ್ಯ ಶಿಕ್ಷಕಿ https://www.vijayavani.net/ambalpadi-road-repair-problem https://www.vijayavani.net/people-benefit-if-they-provide-services-through-cooperation