

ನಿಶಾಂತ್ ಕಿಲೆಂಜೂರು
ಛಲ ಇದ್ದರೆ ಏನನ್ನೂ ಕೂಡ ಸಾಧಿಸಬಹುದು ಎಂಬ ಮಾತಿಗೆ ಉದಾಹರಣೆ ಕಿನ್ನಿಗೋಳಿ ಸಮೀಪದ ಕೆಮ್ರಾಲ್ ನಿವಾಸಿ ಪಲ್ಲೆಕುದ್ರು ಸುಮತಿ ಶೆಟ್ಟಿ. ಇಳಿ ವಯಸ್ಸಿನಲ್ಲೂ ನಿರುಪಯುಕ್ತ ವಸ್ತುಗಳನ್ನು ಒಂದೆಡೆ ಸೇರಿಸಿ ಅದಕ್ಕೆ ಹೊಸ ರೂಪ ಕೊಟ್ಟು ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. 80 ವರ್ಷ ಪ್ರಾಯದ ಸುಮತಿ ಶೆಟ್ಟಿ ಹಲವು ವರ್ಷಗಳಿಂದ ಹಳೆಯ ತ್ಯಾಜ್ಯ ವಸ್ತು ಬಳಸಿ ತಮ್ಮದೇ ಕಲ್ಪನೆಯಲ್ಲಿ ಅವುಗಳಿಗೆ ಜೀವ ಕಳೆ ನೀಡುತ್ತಿದ್ದಾರೆ.
ಮಿನರಲ್ ವಾಟರ್ ಬಾಟಲ್‌ಗಳನ್ನು ತುಂಡರಿಸಿ ಹೂವಾಗಿ ಪರಿವರ್ತಿಸಿದರೆ, ಹಾಳಾದ ತೆಂಗಿನಕಾಯಿಗಳಿಗೆ ಸಿಲ್ವರ್ ಮತ್ತು ಗೋಲ್ಡ್ ಬಣ್ಣ ಬಳಿದು, ಒಂದಕ್ಕೊಂದು ಪೋಣಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ, ತೆಂಗಿನಕಾಯಿ ಚಿಪ್ಪನ್ನು ಗಮ್ ಬಳಸಿ ಅಂಟಿಸಿ ಬಣ್ಣ ಬಳಿದು ಹೊಸ ರೂಪ ನೀಡಿದ್ದಾರೆ. ಹಳೆಯ ಟಯರ್, ಮಣ್ಣಿನ ಮಡಕೆಗಳಿಗೆ ಬಣ್ಣ ಬಳಿದು ಮನೆಯ ಮುಂಭಾಗ ಇರಿಸಿದ್ದು ಆಕರ್ಷಕವಾಗಿ ಕಾಣುತ್ತಿದೆ. ಒಂದು ಜಾತಿಯ ಹುಲ್ಲನ್ನು ತಂದು ಅದನ್ನು ಒಣಗಿಸಿ ಬೇರೆ ಬೇರೆ ಆಕೃತಿಯ ಬುಟ್ಟಿಗಳನ್ನು ಎಣೆದು ಇಟ್ಟಿದ್ದಾರೆ, ಹಳೆಯ ಮನೆಯ ಹಂಚನ್ನು ತಂದು ಅದಕ್ಕೆ ಬೇರೆ ಬೇರೆ ರೀತಿಯ ಬಣ್ಣ ಬಳಿದು ಮನೆಯ ಸುತ್ತ ಅಳವಡಿಸಿದ್ದು ಇನ್ನೂ ಅನೇಕ ವಸ್ತುಗಳು ತಮ್ಮ ಮೂಲ ಸ್ವರೂಪಕಳೆದುಕೊಂಡು ಸುಮತಿ ಶೆಟ್ಟಿಯವರ ಕೈಯಲ್ಲಿ ಹೊಸ ರೂಪ ಪಡೆದಿವೆ.
ಸುಮತಿ ಶೆಟ್ಟಿಯವರು ವಿದ್ಯಾಭ್ಯಾಸ ಮಾಡಿದ್ದು ಕೇವಲ 5ನೇ ತರಗತಿ, ಮದುವೆ ಬಳಿಕ ಕೆಲ ವರ್ಷ ಮುಂಬೈಯಲ್ಲಿ ನೆಲೆಸಿದ್ದು ಊರಿಗೆ ವಾಪಸ್ಸಾದ ಬಳಿಗೆ ಈ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದಾರೆ. ಇಬ್ಬರು ಮಕ್ಕಳು ಹೊರರಾಜ್ಯದಲ್ಲಿ ನೆಲೆಸಿದ್ದು ಇವರ ತಾಯಿಯ ಸಾಧನೆಗೆ ಮಕ್ಕಳು ಮೊಮ್ಮಕ್ಕಳು ಅಳಿಯಂದಿರು ಸಹಕಾರ ನೀಡುತ್ತಿದ್ದಾರೆ. ಇವರ ಈ ಕಲಾಕೃತಿಗಳನ್ನು ನೋಡಲೆಂದೇ ಹಲವಾರು ಮಂದಿ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಸಾಧನೆ ಕಂಡು ಹಲವು ಸಂಘ ಸಂಸ್ಥೆಯವರು ಸನ್ಮಾನಿಸಿದ್ದಾರೆ.
ಹಲವು ವರ್ಷಗಳಿಂದ ನಿರುಪಯುಕ್ತ ವಸ್ತುಗಳಿಗೆ ಜೀವ ನೀಡಿ ಮನೆಯ ಮುಂಭಾಗ ಇರಿಸಿದ್ದೇನೆ, ಬಿಯರ್ ಮತ್ತು ಮಿನರಲ್ ವಾಟರ್ ಬಾಟಲ್‌ಗಳನ್ನು ಬಳಸಿ ಬೇರೆ ಬೇರೆ ರೂಪ ನೀಡಿದ್ದೇನೆ, ಹಳೆಯ ಯಾವುದೇ ವಸ್ತುಗಳಿಗೆ ನನ್ನದೇ ಕಲ್ಪನೆಯಲ್ಲಿ ರೂಪ ನೀಡುತ್ತಿದ್ದೇನೆ. ಸುಮತಿ ಶೆಟ್ಟಿ ಪಲ್ಲೆಕುದ್ರು https://www.vijayavani.net/economic-activity-increases-due-to-shakthi-projects https://www.vijayavani.net/protest-against-440-kv-power-line-company