ಮಾಡೂರು ಶಾಲೆಗೆ ಹೊಸ ಲುಕ್ : ಆಂಗ್ಲ ಮಾಧ್ಯಮ ಸ್ಕೂಲ್ ಅದ್ದೂರಿಯ ಶುಭಾರಂಭ : ಖಾಸಗಿಗಿಂತ ಸೂಪರ್

New Project (36)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಕ್ಕಳ ಸಂಖ್ಯೆ ಕುಂಠಿತಗೊಂಡ ಪರಿಣಾಮ ಮುಚ್ಚುವ ಸ್ಥಿತಿಗೆ ತಲುಪಿದ್ದ ಮಾಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡಿದೆ. ಹೊಸ ಲುಕ್ ಪಡೆದಿರುವ ಶಾಲೆ ಸೋಮವಾರ ಅದ್ದೂರಿಯಾಗಿ ಶುಭಾರಂಭ ಕಂಡಿದೆ.

1979ರಲ್ಲಿ 100ರಷ್ಟು ವಿದ್ಯಾರ್ಥಿಗಳೊಂದಿಗೆ 1ರಿಂದ 4ನೇ ತರಗತಿವರೆಗೆ ಆರಂಭಗೊಂಡ ಶಾಲೆಯಲ್ಲಿ ಪ್ರಸ್ತುತ 8ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಈ ಶಾಲೆಯಲ್ಲೂ ಮಕ್ಕಳ ಸಂಖ್ಯೆ ಕುಂಠಿತವಾಗುತ್ತಾ ಸಾಗಿದ್ದು, ಕಳೆದ ಶೈಕ್ಷಣಿಕ ವರ್ಷಾಂತ್ಯಕ್ಕೆ ಇದ್ದ ಒಟ್ಟು ಮಕ್ಕಳ ಸಂಖ್ಯೆ ಕೇವಲ 69! ಮುಖ್ಯ ಶಿಕ್ಷಕಿ ಸಹಿತ ಮೂವರು ಶಾಶ್ವತ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕಿ ಇದ್ದಾರೆ.

ಶಾಲೆಯ ಸುತ್ತಲೂ ಗಿಡ, ಬಳ್ಳಿಗಳಿಂದ ಆವೃತ್ತವಾಗಿ ಇನ್ನೇನು ಶಾಲೆ ಮುಚ್ಚಲಿದೆ ಎನ್ನುವಾಗ ಕೋಟೆಕಾರ್ ಪಟ್ಟಣ ಪಂಚಾಯಿತಿಯ ಸ್ಥಳೀಯ ಸದಸ್ಯ ಸುಜಿತ್ ಮಾಡೂರು ಊರವರು, ಶಿಕ್ಷಣಾಸಕ್ತರನ್ನು ಸೇರಿಸಿ ಆಟಿಡೊಂಜಿ ದಿನ ಕಾರ್ಯಕ್ರಮದ ಮೂಲಕ ಏದುಸಿರು ಬಿಡುತ್ತಿದ್ದ ಶಾಲೆಗೆ ಆಕ್ಸಿಜನ್ ನೀಡಲು ಮುಂದಾದಾಗ ವ್ಯಾಪಕ ಬೆಂಬಲ ಲಭಿಸಿತು.

ಹೈಟೆಕ್ ಟಚ್: ದಾನಿಗಳ ನೆರವಿನಿಂದ ಹೊಸ ಕಟ್ಟಡ ನಿರ್ಮಿಸಿ ಎಲ್ಕೆಜಿ, ಯುಕೆಜಿ, ಆಂಗ್ಲ ಮಾಧ್ಯಮದಲ್ಲಿ 1ನೇ ತರಗತಿ ಆರಂಭಿಸುವ ಬಗ್ಗೆ ಅಲ್ಲಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದರ ಫಲವಾಗಿ ಎಲ್ಕೆಜಿಗೆ ನಿರ್ದಿಷ್ಟ ಸಂಖ್ಯೆಗಿಂತಲೂ ಹೆಚ್ಚಿನ ಮಕ್ಕಳು ತಿಂಗಳ ಹಿಂದೆಯೇ ಸೇರ್ಪಡೆಯಾಗಿದ್ದಾರೆ.

ಪ್ರಸ್ತುತ ಖಾಸಗಿ ಆಂಗ್ಲ ಮಾಧ್ಯಮವನ್ನೂ ಮೀರಿಸುವ ರೀತಿಯಲ್ಲಿ ಈ ಶಾಲೆಯನ್ನು ಹೈಟೆಕ್‌ಗೊಳಿಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಂಪ್ಯೂಟರ್ ಆಧಾರಿತ ವ್ಯವಸ್ಥೆಗೆ ಆದ್ಯತೆ ನೀಡಲಾಗಿದ್ದು, ಸ್ಮಾರ್ಟ್ ತರಗತಿ, ವೈಫೈ, ಸಿಸಿ ಕ್ಯಾಮರಾ, ಪ್ರತಿಕೋಣೆಗೆ ಟಿವಿ ವ್ಯವಸ್ಥೆ ಮಾಡಲಾಗಿದೆ. ಶಾಲಾ ಕಟ್ಟಡ, ತರಗತಿ ಕೊಠಡಿಗಳಿಗೆ ಹೊಸ ಲುಕ್ ನೀಡಲಾಗಿದೆ.

ಅದ್ದೂರಿ ಶಾಲಾರಂಭ: ಸೋಮವಾರ ಅದ್ದೂರಿಯಾಗಿ ಶಾಲಾರಂಭ ಕಾರ್ಯಕ್ರಮ ನಡೆದಿದ್ದು, ಎಲ್ಕೆಜಿ, ಯುಕೆಜಿಗೆ ತರಗತಿ ಕೋಣೆಗಳ ಉದ್ಘಾಟನೆ ನಡೆಯಿತು. ಚೆಂಡೆಯ ಸದ್ದಿನೊಂದಿಗೆ ಎಲ್ಕೆಜಿ, ಯುಕೆಜಿಯ ಮಕ್ಕಳನ್ನು ಶಿಕ್ಷಕರು, ಪಾಲಕರು, ಗಣ್ಯರು ಮೆರವಣಿಗೆಯಲ್ಲಿ ಕರೆತಂದರು. ಶಿಕ್ಷಕಿಯರು ಹೂವಿನ ಸಿಂಚನದ ಮೂಲಕ ತರಗತಿಗೆ ಬರಮಾಡಿಕೊಂಡರು.

ಶಿಕ್ಷಕರು, ಕೊಠಡಿ, ಶೌಚಗೃಹ ಕೊರತೆ

ಈಗಾಗಲೇ ಆವರಣದಲ್ಲಿ ಗಾರ್ಡನ್ ನಿರ್ಮಿಸಲು ಮೂಡಾದಿಂದ 5 ಲಕ್ಷ ಅನುದಾನ ಮೀಸಲಿಡಲಾಗಿದೆ. ಗಂಡು ಮಕ್ಕಳ ಶೌಚಗೃಹ, ತರಗತಿಗೆ ಕೊಠಡಿ, ಶಿಕ್ಷಕರ ಕೊರತೆ ಇದೆ. ಮಳೆಗಾಲದಲ್ಲಿ ಅಂಗಳದಲ್ಲಿ ನೀರು ನಿಲ್ಲುವ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ. ಮುಖ್ಯಶಿಕ್ಷಕಿ ಸಹಿತ ಮೂವರು ಶಾಶ್ವತ, ಓರ್ವ ಅತಿಥಿ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷದಿಂದ ಮೂವರು ಅತಿಥಿ ಶಿಕ್ಷಕರು, ಇಬ್ಬರು ಆಯಾಗಳನ್ನು ಸ್ಥಳೀಯರು ನೇಮಿಸಿದ್ದು ವೇತನ, ನಿರ್ವಹಣೆಗಾಗಿ 70 ಸಾವಿರ ವೆಚ್ಚ ಸ್ಥಳೀಯರ ನೆರವಿನಿಂದ ಶಾಲಾಭಿವೃದ್ಧಿ ಸಮಿತಿ ಭರಿಸಲಿದೆ.

ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಸ್ಥಾನ ತಲುಪಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಲು ಆಂಗ್ಲಭಾಷಾ ಜ್ಞಾನ ಅಗತ್ಯವಿದೆ. ಆ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಅಗತ್ಯ ಇದೆ.

ಸದಾಶಿವ ಉಳ್ಳಾಲ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ಕೇವಲ ಆಂಗ್ಲ ಮಾಧ್ಯಮ ಎಂದು ತೋರಿಕೆಗೆ ಮಾಡದೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಸ್ಮಾರ್ಟ್ ತರಗತಿಯ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣವೂ ಅದೇ ಮಾದರಿಯಲ್ಲಿ ಇರಲಿ. ಹೊರಾಂಗಣದಲ್ಲೂ ಶೀಘ್ರ ಸೌಂದರ್ಯಕ್ಕೆ ಆದ್ಯತೆ ನೀಡಲಾಗುವುದು.

ಸುಜಿತ್ ಮಾಡೂರು, ಕೋಟೆಕಾರ್ ಪ.ಪಂ. ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net