

ಬೆಂಗಳೂರು: ವಿಶ್ವಕರ್ಮ ಸಮಾಜದ ಪ್ರಮುಖ ಸಂಘಟನೆಯಾದ ವಿಜಯಕುಮಾರ್ ಪತ್ತಾರ್ ನೇತೃತ್ವದ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಮಟ್ಟದ ಕಾರ್ಯಾಲಯವನ್ನು ಕಾಂಗ್ರೆಸ್ ಮುಖಂಡ ಉಮಾಶಂಕರ್ ಉದ್ಘಾಟಿಸಿದರು.
ಕಾವಲ್ ಬೈರಸಂದ್ರದ ರೈನ್ಬೋ ಶಾಲೆ ಸಂಸ್ಥಾಪಕ ಸುರೇಶ್ ಉಚಿತವಾಗಿ ನೀಡಿರುವ ಕಟ್ಟಡದಲ್ಲಿ ನೂತನ ಕಾರ್ಯಾಲಯ ಸ್ಥಾಪಿಸಲಾಗಿದೆ.
ಕಚೇರಿ ಉದ್ಘಾಟಿಸಿ ಮಾತನಾಡಿದ ಉಮಾಶಂಕರ್, ಪ್ರತಿ ಊರು, ಗ್ರಾಮದಲ್ಲಿ ಪ್ರಾತಿನಿಧ್ಯ ಹೊಂದಿರುವ ವಿಶ್ವಕರ್ಮ ಸಮುದಾಯ ತಮ್ಮ ಕಲಾ ಪ್ರೌಢಿಮೆ, ಕಾಯಕದಿಂದ ಬದುಕು ಸಾಗಿಸುವ ಗುಣದಿಂದಾಗಿ ಎಲ್ಲಾ ಸಮಾಜದವರಿಂದ ಗೌರವಕ್ಕೆ ಭಾಜನರಾಗಿದ್ದಾರೆ. ನೂತನ ಒಕ್ಕೂಟ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಸೇತುವೆಯಾಗಲಿ ಎಂದರು.
ರಾಜ್ಯ ವಿಶೇಷಚೇತನ ನಿಗಮದ ಮಾಜಿ ಆಯುಕ್ತ ಪದ್ಮಶ್ರೀ ಕೆ.ಎಸ್.ರಾಜಣ್ಣ ಮಾತನಾಡಿ, ಸೃಷ್ಟಿಕರ್ತರಾದ ವಿಶ್ವಕರ್ಮ ಸಮುದಾಯದವರು ತಾವೂ ಯಾವುದೇ ರಂಗದಲ್ಲಿದ್ದರೂ ಆ ವೃತ್ತಿಗೆ ಗೌರವ ತರುವಂತೆ ಸಾಧನೆ ಮಾಡುವ ಸಾಮರ್ಥ್ಯವುಳ್ಳವರು. ಆದರೆ ಸಮುದಾಯದವರಿಗೆ ಶೈಕ್ಷಣಿಕ, ರಾಜಕೀಯವಾಗಿ ಸಿಗುತ್ತಿರುವ ಅವಕಾಶ ಕಡಿಮೆ ಇದ್ದು, ಒಕ್ಕೂಟ ಸಮಾಜದ ಪ್ರತಿಭಾವಂತರಿಗೆ ಅವಕಾಶ ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮಲ್ಲಿ ವರವಿ ಕ್ಷೇತ್ರದ ಅಧ್ಯಕ್ಷ ಮೋಹನ್ ನರಗುಂದ್, ನಿವೃತ್ತ ಡಿವೈಎಸ್ಪಿ ಪ್ರಭಾಕರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಟಿ. ಸಿ. ಡಮರುಗೇಶ, ಒಕ್ಕೂಟದ ಉಪಾಧ್ಯಕ್ಷ ಶಿವಾರಪಟ್ಟಣ ಮಹಾದೇವ್, ಖಾದಿ ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಾಲಯ ಪ್ರಾರಂಭೋತ್ಸವದ ನಿಮಿತ್ತ ಹೋಮ, ಹವನ, ವಿಶ್ವಕರ್ಮ ಪೂಜೆ ನೆರವೇರಿಸಲಾಯಿತು. ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಮ್ಮದು ಯಾರ ವಿರುದ್ಧದ ಸಂಘಟನೆಯಲ್ಲ. ಸಮಾಜವನ್ನು ಕ್ರಮಬದ್ಧ ಮಾರ್ಗದಲ್ಲಿ ಪಕ್ಷಾತೀತವಾಗಿ ಮುನ್ನೆಡೆಸುವ ಒಕ್ಕೂಟ. ಸಾಮಾಜಿಕ ನ್ಯಾಯ ಪಡೆಯುವ ಹಾಗೂ ಸಮುದಾಯಕ್ಕೆ ನ್ಯಾಯ ಒದಗಿಸುವುದೇ ಒಕ್ಕೂಟದ ಉದ್ದೇಶ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಒಕ್ಕೂಟ ವನ್ನು ಸಮಾಜದ ಪ್ರಬಲ ಧ್ವನಿಯಾಗಿ ರೂಪಿಸಲಾಗುವುದು.
-ವಿಜಯಕುಮಾರ್ ಪತ್ತಾರ್, ಒಕ್ಕೂಟದ ಅಧ್ಯಕ್ಷ