ಕರ್ನಾಟಕ ಸೇರಿದಂತೆ 8 ಹೈಕೋರ್ಟ್​ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸು

judges
Published on

ನವದೆಹಲಿ: ದೇಶದ 8 ಹೈಕೋರ್ಟ್​​ಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕಾಗಿ ಸುಪ್ರೀಂ ಕೋರ್ಟ್​ ಕೊಲೆಜಿಯಮ್​ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅಲಹಾಬಾದ್‌ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಅವರ ಹೆಸರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ(ಸಿಜೆ) ಹುದ್ದೆಗೆ ಶಿಫಾರಸು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ದೇಶದ 14 ಹೈಕೋರ್ಟ್​ಗಳ ನ್ಯಾಯಮೂರ್ತಿಗಳ ದೊಡ್ಡ ಪ್ರಮಾಣದ ವರ್ಗಾವಣೆಗೆ ಶಿಫಾರಸು ಮಾಡಲಾಗಿದ್ದು, ಇದೇ ಮೊದಲ ಬಾರಿ ಒಮ್ಮೆಲೇ ಎಂಟು ಹೈಕೋರ್ಟ್‌ಗಳಿಗೆ ಹೊಸ ಸಿಜೆಗಳನ್ನು ಸೂಚಿಸಲಾಗಿದೆ. ಕರ್ನಾಟಕದ ಒಟ್ಟು ನಾಲ್ವರು ನ್ಯಾಯಮೂರ್ತಿಗಳ ಹೆಸರು ಕೊಲೆಜಿಯಂನ ಶಿಫಾರಸು ಪಟ್ಟಿಯಲ್ಲಿದೆ ಎನ್ನಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ಅವರನ್ನು ತೆಲಂಗಾಣ ಹೈಕೋರ್ಟ್‌ ಸಿಜೆ ಆಗಿ, ಮತ್ತು ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರನ್ನು ಗುಜರಾತ್‌ ಹೈಕೋರ್ಟ್‌ ಸಿಜೆ ಆಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

ಕೊಲ್ಕತ ಹೈಕೋರ್ಟ್​ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್​ ಬಿಂಡಾಲ್​ ಅವರನ್ನು ಅಲಹಾಬಾದ್​ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾಗಿ ಹೆಸರಿಸಲಾಗಿದೆ. ಕೊಲ್ಕತ, ಆಂಧ್ರಪ್ರದೇಶ, ಮೇಘಾಲಯ, ಮಧ್ಯಪ್ರದೇಶ ಹೈಕೋರ್ಟ್​ಗಳಿಗೂ ನೂತನ ಮುಖ್ಯ ನ್ಯಾಯಮೂರ್ತಿಗಳು ಲಭಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net