ವಿವಾದಿತ ಪ್ರದೇಶಗಳನ್ನು ಒಳಗೊಂಡ ಹೊಸ ನಕ್ಷೆಗೆ ನೇಪಾಳ ಸಂಸತ್​ ಅನುಮೋದನೆ

nepal
Published on

ಕಾಠ್ಮಂಡು: ಭಾರತದೊಂದಿಗೆ ಅಪ್ತ ಸ್ನೇಹ-ಸಂಬಂಧ ಹೊಂದಿದ್ದ ಪುಟಾಣಿ ರಾಷ್ಟ್ರ ನೇಪಾಳ ಇದೀಗ ಭಾರತದ ವಿರುದ್ಧ ತೊಡೆತಟ್ಟತೊಡಗಿದೆ. ಭಾರತ-ನೇಪಾಳ ಗಡಿಭಾಗದಲ್ಲಿರುವ ವಿವಾದಿತ ಪ್ರದೇಶಗಳನ್ನು ಒಳಗೊಂಡಂತೆ ತಾನು ರೂಪಿಸಿಕೊಂಡಿರುವ ಹೊಸ ರಾಜಕೀಯ ನಕ್ಷೆಗೆ ನೇಪಾಳ ಸಂಸತ್​ ಶನಿವಾರ ಅನುಮೋದನೆ ನೀಡಿದೆ.

ವಿವಾದಿತ ಪ್ರದೇಶಗಳಾದ ಲಿಪುಲೇಕ್​, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ಒಳಗೊಂಡು, ಹೊಸದಾಗಿ ರೂಪಿಸಿರುವ ನಕ್ಷೆಯನ್ನು ಪ್ರಧಾನಿ ಕೆ.ಪಿ. ಓಲಿ ಇತ್ತೀಚೆಗೆ ಸಂಸತ್​ನಲ್ಲಿ ಮಂಡಿಸಿದ್ದರು. ಹೊಸ ನಕ್ಷೆಯನ್ನು ಒಳಗೊಂಡ ರಾಷ್ಟ್ರೀಯ ಲಾಂಛನ ರೂಪಿಸಲು ನೇಪಾಳದ ಸಂವಿಧಾನದ 3ನೇ ವಿಧಿಗೆ ತಿದ್ದುಪಡಿ ತರುವ ಮಸೂದೆಯನ್ನೂ ಮಂಡಿಸಿದ್ದರು. ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್​, ರಾಷ್ಟ್ರೀಯ ಜನತಾ ಪಾರ್ಟಿ-ನೇಪಾಳ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿಗಳು ಕೂಡ ಈ ನಿರ್ಣಯಗಳ ಪರವಾಗಿ ಮತಚಲಾಯಿಸಿದವು ಎನ್ನಲಾಗಿದೆ.

ನಕ್ಷೆಗೆ ಮಂಜೂರಾತಿ ಪಡೆಯಲು 275 ಸದಸ್ಯ ಬಲದ ಸಂಸತ್​ನಲ್ಲಿ ಮೂರನೇ ಎರಡು ಭಾಗದಷ್ಟು ಬೆಂಬಲದ ಅವಶ್ಯಕತೆ ಇತ್ತು. ಪ್ರಮುಖ ಪ್ರತಿಪಕ್ಷಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದರಿಂದ, ನಕ್ಷೆಯು ಸರ್ವಾನುಮತದಿಂದ ಅನುಮೋದನೆಗೊಂಡಿತು.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮೇ 8ರಂದು ಮಾನಸಸರೋವರ ಯಾತ್ರೆಯ ಅಂತರವನ್ನು ಕಡಿಮೆ ಮಾಡುವಂಥ 80 ಕಿ.ಮೀ. ಉದ್ದದ ಲಿಪುಲೇಖ್​ ಪಾಸ್​ ಮತ್ತು ಉತ್ತರಾಖಂಡದ ಧಾರ್​ಚುಲಾ ನಡುವಿನ ರಸ್ತೆಯನ್ನು ಉದ್ಘಾಟಿಸಿದ್ದರು. ಇದು ನೇಪಾಳದ ಕೆಂಗಣ್ಣಿಗೆ ಕಾರಣವಾಗಿತ್ತು. ಅಂದಿನಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಿಸಿತ್ತು.

ಈ ರಸ್ತೆ ನೇಪಾಳದ ಸರಹದ್ದನ್ನು ಹಾದುಹೋಗುತ್ತದೆ ಎಂಬ ಕಾರಣ ನೀಡಿ ನೇಪಾಳ ಭಾರತದ ಕ್ರಮವನ್ನು ಖಂಡಿಸಿತ್ತು. ಆದರೆ, ಇದನ್ನು ಅಲ್ಲಗಳೆದಿದ್ದ ಭಾರತ ಅದು ತನ್ನ ಸರಹದ್ದಿನಲ್ಲಿ ಬರುವ ಪ್ರದೇಶ ಎಂದು ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ನೇಪಾಳ ವಿವಾದಿತ ಪ್ರದೇಶಗಳನ್ನು ಒಳಗೊಂಡಂತೆ ಹೊಸ ನಕ್ಷೆಯನ್ನು ಸಿದ್ಧಪಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net