ನೇಪಾಳದಲ್ಲಿ ವಿಮಾನ ಪತನ: 68ಕ್ಕೇರಿದ ಸಾವಿನ ಸಂಖ್ಯೆ, ಐವರು ಭಾರತೀಯರೂ ಸಾವು?

Aircraft crash at Pokhara Airport in Nepal
Published on

ಕಠ್ಮಂಡು: ನೇಪಾಳದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್​ವೇ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಎಲ್ಲ ಪ್ರಯಾಣಿಕರೂ ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗಿದೆ. ಐವರು ಭಾರತೀಯರು ಸೇರಿದಂತೆ 72 ಮಂದಿ ವಿಮಾನದಲ್ಲಿದ್ದರು. ಸದ್ಯ 68 ಜನರ ಮೃತದೇಹಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಕಠ್ಮಂಡುವಿನ ತ್ರಿಭುವನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್‌ಲೈನ್ಸ್ ಎಟಿಆರ್​-72 ವಿಮಾನವು ಇಂದು ಬೆಳಗ್ಗೆ 10.30ಕ್ಕೆ ಟೇಕಾಪ್​ ಆಗಿತ್ತು. ಇದರಲ್ಲಿ 68 ಪ್ರಯಾಣಿಕರು ಸೇರಿ ನಾಲ್ವರು ಸಿಬ್ಬಂದಿ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ಲ್ಯಾಂಡಿಗ್​ ಆಗಬೇಕು ಅನ್ನುವಷ್ಟರಲ್ಲಿ ಪೋಖರಾ ವಿಮಾನ ನಿಲ್ದಾಣದ ರನ್​ ವೇ ಸಮೀಪ ಸೇತಿ ನದಿ ತೀರದಲ್ಲಿ ಪತನಗೊಂಡು ನೆಲಕ್ಕೆ ಅಪ್ಪಳಿಸಿದೆ. ವಿಮಾನ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ವಿಮಾನ ಪತನಗೊಂಡ ವೇಳೆ ಬಂದ ಬಾರೀ ಶಬ್ದಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ತಂಡ ಅಪಘಾತದ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿದೆ. ಇದುವರೆಗೂ ಯಾರೊಬ್ಬರೂ ಬದುಕಿರುವ ಮಾಹಿತಿ ಲಭ್ಯವಾಗಿಲ್ಲ. 68 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇನ್ನೂ ನಾಲ್ವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಈ ವಿಮಾನದಲ್ಲಿ 53 ಮಂದಿ ನೇಪಾಳಿಯರು, ಐವರು ಭಾರತೀಯರು, ನಾಲ್ವರು ರಷ್ಯನ್, ಒಬ್ಬ ಐರಿಶ್, ಇಬ್ಬರು ಕೊರಿಯನ್​, ಒಬ್ಬರು ಅರ್ಜೆಂಟೀನಿಯನ್ ಮತ್ತು ಒಬ್ಬ ಫ್ರೆಂಚ್ ಪ್ರಜೆ ಇದ್ದರು. ಈ ಪೈಕಿ ಇಬ್ಬರು ಮಕ್ಕಳು ಇದ್ದರು. ಐವರು ಭಾರತೀಯರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net