ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ; 28,576 ವಿದ್ಯಾರ್ಥಿಗಳಿಂದ ಬಹುಶಿಸ್ತೀಯ ಶಿಕ್ಷಣ ಕಲಿಕೆ

web 5
Published on

ಧಾರವಾಡ: ಕೇಂದ್ರ ಸರ್ಕಾರ ದೇಶಾದ್ಯಂತ  ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‌ಸಿ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಜು. 29ಕ್ಕೆ 3 ವರ್ಷ ತುಂಬುತ್ತಿವೆ. ಈ ಮೂಲಕ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ, ಜವಾಹರ ನವೋದಯ ವಿದ್ಯಾಲಯ ಮತ್ತು ಸಿಬಿಎಸ್‌ಸಿ ಸೇರಿ 35 ಶಾಲೆಗಳ ಸುಮಾರು 28,576 ಮಕ್ಕಳು ಎನ್‌ಇಪಿ ಅಡಿ ಬಹುಶಿಸ್ತೀಯ ಮತ್ತು ಕೌಶಲ್ಯಾಧಾರಿತ ಶಿಕ್ಷಣ ಕಲಿಯುತ್ತಿದ್ದಾರೆ ಎಂದು ಧಾರವಾಡ ಕೇಂದ್ರೀಯ ವಿದ್ಯಾಲಯದ ಉಪ ಪ್ರಾಚಾರ್ಯ ಜುನ್ನಾ ರಾಮ್ ಹೇಳಿದರು.
ನಗರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲೆಯ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸುದ್ದಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎನ್‌ಇಪಿಯಲ್ಲಿ ಮೌಖಿಕ ಕಲಿಕೆಗಿಂತ ವಿಮರ್ಶಾತ್ಮಾಕ ಚಿಂತನೆಯನ್ನು ಉತ್ತೇಜಿಸಿ ಅಧ್ಯಯನದ ಬದಲಿಗೆ ವಿದ್ಯಾರ್ಥಿಗಳು ಕಲಿಕೆಯತ್ತ ಗಮನ ಹರಿಸಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಅನುವಾಗುವಂತೆ ವಿಷಯ ಪ್ರಸ್ತುತಿ ಮಾಡಲಾಗುತ್ತಿದೆ. ಜಾಗತಿಕದೊಂದಿಗೆ ಸ್ಥಳೀಯ ಕಲೆ, ಕೌಶಲ ಮತ್ತು ಉದ್ಯೋಗಗಳಿಗೆ ಪೂರಕ ವಾತಾವರಣವನ್ನು ಮಕ್ಕಳಲ್ಲಿ ಬಾಲ್ಯದಲ್ಲೇ ಬೆಳೆಸಲು ಎನ್‌ಇಪಿ ಆದ್ಯತೆ ನೀಡಿದೆ ಎಂದರು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಬಾಲವಾಟಿಕಾ 1ರಿಂದ 3ರವರೆಗೆ ಕಲಿಯುವ ಮಕ್ಕಳಲ್ಲಿ ಮೂಲ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಬೆಳೆಸಲು, ಸಂವಹನ ಕಲೆಯನ್ನು ಬೆಳೆಸಲು ಕ್ರಮ ವಹಿಸಲಾಗಿದೆ. ಪೋಷಕರೂ ತಮ್ಮ ಜ್ಞಾನವನ್ನು ಮಕ್ಕಳಿಗೆ ಶಾಲಾ ಅವಧಿಯಲ್ಲಿ ಕಲಿಸಲು ಅವಕಾಶ ನೀಡಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯೆ ಹೇಮಲತಾ ಯು., ಉಪ ಪ್ರಾಚಾರ್ಯ ಸ್ಯಾಮುಯಲ್ ನವನೀತರಾಜ್, ಹುಬ್ಬಳ್ಳಿ ರಾಜನಗರದ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ರವಿರಾಜೇಶ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಜಿ.ಎನ್. ಮಠಪತಿ, ಎಸ್.ಎಂ. ಹುಡೇದಮನಿ, ಜೆ.ಎಸ್.ಎಸ್. ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯೆ ಸಾಧನಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net