ಆರೋಪಿಯಿಂದಲೇ ಸ್ವಯಂ ವಾದ ಮಂಡನೆ...!

Nejaru
Published on

ನೇಜಾರು ಕೊಲೆ ಪ್ರಕರಣದ ವಿಚಾರಣೆ

ವಕಾಲತು ಹಿಂಪಡೆದ ಆರೋಪಿಪರ ವಕೀಲ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಲ್ಪೆ ಸಮೀಪದ ನೇಜಾರು ಗ್ರಾಮದಲ್ಲಿ ಕಳೆದ ವರ್ಷ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪ್ರವೀಣ ಚೌಗಲೆ ಸ್ವಯಂ ವಾದ ಮಂಡಿಸುವುದಾಗಿ ನ್ಯಾಯಾಧೀಶರ ಬಳಿ ತಿಳಿಸಿದ್ದು, ಇದಕ್ಕೆ ಸರ್ಕಾರಿ ವಿಶೇಷ ಅಭಿಯೋಜಕ ಆಕ್ಷೇಪಣೆ ಸಲ್ಲಿಸಿದ್ದಾರೆ.

ಜೂ.20ರ ಬೆಳಗ್ಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಧೀಶ ಸಮೀವುಲ್ಲಾ ಅವರ ಪೀಠದಲ್ಲಿ ಬೆಳಗ್ಗೆ ಕಲಾಪದಲ್ಲಿ ಪ್ರಕರಣದ ಸಾಕ್ಷಿ 1ರ ಮುಖ್ಯ ವಿಚಾರಣೆ (ಚೀಫ್​ ಎಕ್ಸಾಮಿನೇಷನ್​) ನಡೆಯಿತು. ಈ ವೇಳೆ ಆರೋಪಿಪರ ವಕೀಲರು ಆಸಕ್ತ ಸಾಕ್ಷ್ಯಗಳ ವಿಚಾರಣೆ ನಡೆಸಿದ ಬಳಿಕ 'ಪಾಟಿ ಸವಾಲು' (ಕ್ರಾಸ್​ ಎಕ್ಸಾಮಿನೇಷನ್​) ಮಾಡುವುದಾಗಿ ಅರ್ಜಿ ಸಲ್ಲಿಸಿದರು. ಇದಕ್ಕೆ ವಿಶೇಫಿ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು.

ವಕಾಲತಿಗೆ ನಿರಾಕರಣೆ

ಇದೇ ಪ್ರಕರಣದ ಮಧ್ಯಾಹ್ನ ನಡೆದ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾದ ಆರೋಪಿಪರ ಎರಡನೇ ವಕೀಲ, ಪ್ರಕರಣದಿಂದ ನನ್ನ ವಕಾಲತು ವಾಪಾಸ್​ ಪಡೆಯುತ್ತಿದ್ದೇನೆ ಎಂದು ತಿಳಿಸಿದರು. ಹೀಗಾಗಿ ಬೆಳಗ್ಗೆ ಸಲ್ಲಿಸಿದ್ದ ಅರ್ಜಿಗೆ ಹಾಗೂ ಸರ್ಕಾರಿ ವಿಶೇಷ ಅಭಿಯೋಜಕರ ಆಕ್ಷೇಪಣೆಗೆ ನ್ಯಾಯಾಲಯ ಯಾವುದೇ ಆದೇಶ ನೀಡಲಿಲ್ಲ.

ನಾನೇ ವಾದಿಸುವೆ ಎಂದ ಆರೋಪಿ

ತನ್ನ ವಕೀಲ ವಕಾಲತಿಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಚೌಗಲೆ, ನಾನೇ ವಾದ ಮಂಡಿಸುತ್ತೇನೆ. ಸಾಕ್ಷ್ಯಗಳ ಪಾಟಿ ಸವಾಲನ್ನೂ ನಾನೇ ಮಾಡುತ್ತೇನೆ ಎಂದು ತಿಳಿಸಿದನು. ಇದಕ್ಕೆ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿದರು. ಆ ಕುರಿತಾಗಿ ನಾಳೆ (ಜೂ.20) ಹೇಳುವುದಾಗಿ ತಿಳಿಸಿದ್ದನು.

ಇಂಗ್ಲಿಷ್​ಗೆ ಭಾಷಾಂತರಿಸಲು ಒತ್ತಾಯ

ತನ್ನ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಇಂಗ್ಲಿಷ್​ಗೆ ಭಾಷಾಂತರಿಸುವಂತೆ ವಿನಂತಿಸಿದ್ದು, 'ನಿಮ್ಮ ವಕೀಲರಿಗೆ ಅದನ್ನು ಈಗಾಗಲೇ ನೀಡಲಾಗಿದೆ. ಮತ್ತೆ ಭಾಷಾಂತರಿಸಿ ನೀಡುವುದಿಲ್ಲ' ಎಂದು ನ್ಯಾಯಧೀಶರು ತಿಳಿಸಿದರು. ಅದಕ್ಕೆ ಅರೋಪಿ ಪ್ರತಿಕ್ರಿಯಿಸಿ, ಕಾರಾಗೃಹಕ್ಕೇ ದೋಷಾರೋಪಣ ಪಟ್ಟಿ ತಂದುಕೊಡುವಂತೆ ನ್ಯಾಯಾಲಯಕ್ಕೆ ವಿನಂತಿಸಿದ್ದಾಗಿ ತಿಳಿದುಬಂದಿದೆ. ಸರ್ಕಾರಿ ವಿಶೇಷ ಅಭಿಯೋಜಕ ಶಿವಪ್ರಸಾದ್​ ಆಳ್ವ ಇದ್ದರು.

ಬಿಗಿ ಪೊಲೀಸ್​ ಭದ್ರತೆ

ಬೆಂಗಳೂರಿನ ಜೈಲಿನಲ್ಲಿದ್ದ ಆರೋಪಿ ಪ್ರವೀಣ ಚೌಗಲೆಯನ್ನು ಬಿಗಿ ಪೋಲಿಸ್​ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ಮಂಗಳೂರು ಜೈಲಿಗೆ ರವಾನಿಸಲಾಯಿತು.

ಜು.4ಕ್ಕೆ ವಿಚಾರಣೆ ಮುಂದೂಡಿಕೆ

ಶುಕ್ರವಾರ (ಜೂ.20) ಬೆಳಗ್ಗೆ 11:45ಕ್ಕೆ ಮತ್ತೆ ವಿಚಾರಣೆ ಆರಂಭಿಸಲಾಯಿತು. ಆರೋಪಿ ಪರ ಹಿಂದಿನ ವಕೀಲರು ಸಲ್ಲಿಸಿದ್ದ ವಕಾಲತು ಹಿಂಪಡೆದ ಮೆಮೊವನ್ನು ನ್ಯಾಯಾಲಯ ಅಂಗೀಕರಿಸಿತು. ಹೀಗಾಗಿ ಆರೋಪಿ ಪ್ರವೀಣ ಚೌಗಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ರಕ್ಷಣಾ ಮಂಡಳಿಯ ನೆರವು ಕೇಳಿ ಅರ್ಜಿ ಸಲ್ಲಿಸಿದನು. ನ್ಯಾಯಾಲಯದ ಕಚೇರಿಯಿಂದ ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರದ ಮೂಲಕ ಆರೋಪಿಯ ಅರ್ಜಿ ರವಾನಿಸಲಾಯಿತು. ಬಳಿಕ ಮುಂದುವರಿದ ವಿಚಾರಣೆಯಲ್ಲಿ ಪ್ರಕರಣದ ಡಿಫೆನ್ಸ್​ ಕೌನ್ಸಿಲ್​ ಮುಖ್ಯಸ್ಥ ರಾಜು ಪೂಜಾರಿ ಆರೋಪಿಪರ ವಕಾಲತು ಸಲ್ಲಿಸಿದರು. ಸಂತ್ರಸ್ತರ ಕುಟುಂಬದ ಪರ ಹಾಜರಿದ್ದ ಸರ್ಕಾರಿ ಅಭಿಯೋಜಕ ಶಿವಪ್ರಸಾದ್​ ಆಳ್ವ, 2 ಮತ್ತು 3ರ ಮುಖ್ಯ ವಿಚಾರಣೆ ನಡೆಸಿದರು. ತನ್ನ ವಿರುದ್ಧದ ದೋಷಾರೋಪ ಪಟ್ಟಿ ಹಿಂದಿನ ವಕೀಲರಲ್ಲಿ ಇರುವುದಾಗಿ ಆರೋಪಿ ಚೌಗಲೆ ತಿಳಿಸಿದನು. ಹೀಗಾಗಿ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net