

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ನಿರೀಕ್ಷೆಗಿಂತ ಮೊದಲೇ ಮಳೆಗಾಲ ಪ್ರಾರಂಭವಾದ ಕಾರಣಕ್ಕೆ ಹಲವಾರು ಇಲಾಖೆಗಳಲ್ಲಿ ಪೂರ್ವಸಿದ್ಧತೆ ಆಗದೇ ಇರುವುದರಿಂದ ಈ ಬಾರಿ ಎಲ್ಲೆಡೆ ಸಮಸ್ಯೆ ಕಾಣಿಸಿದೆ. ಆದಾಗ್ಯೂ ಗ್ರಾಮಮಟ್ಟದಲ್ಲಿ ಪಿಡಿಒ ನೇತೃತ್ವದಲ್ಲಿ ಸಂಕಷ್ಟಕ್ಕೆ ಸ್ಪಂದಿಸುವ ತಂಡ ರಚಿಸಲಾಗಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ತಿಳಿಸಿದರು.
ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ಬುಧವಾರ ನೆರೆ ಮುಂಜಾಗ್ರತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಸ್ತೆ ಡಾಂಬರೀಕರಣ, ಕಾಂಕ್ರೀಟೀಕರಣ ಕಾಮಗಾರಿ ಮಳೆಯಿಂದಾಗಿ ಎಲ್ಲೆಡೆ ಅಪೂರ್ಣವಾಗಿದೆ. ಗಾಳಿ ಮಳೆಗೆ ಸಿಲುಕಿ ಮೆಸ್ಕಾಂ ಇಲಾಖೆ ಭಾರಿ ಹಾನಿಗೆ ತುತ್ತಾಗಿದ್ದು, ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ಪುತ್ತೂರು ತಾಲೂಕಿನಲ್ಲೇ 237 ವಿದ್ಯುತ್ ಕಂಬಗಳನ್ನು ಹಾಗೂ 15 ಪರಿವರ್ತಕಗಳನ್ನು ಕಳೆದುಕೊಂಡಿದೆ. ಅಪಾಯಕಾರಿ ಮರಗಳ ಬಗ್ಗೆ ಅರಣ್ಯ ಇಲಾಖೆ ನಿಗಾವಿರಿಸಬೇಕು. ಶಾಲಾ ಕಾಲೇಜು ಮತ್ತು ಅಂಗನವಾಡಿ ಕಟ್ಟಡಗಳ ಶಿಥಿಲತೆ ಬಗ್ಗೆ ನಿಗಾವಿರಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು.
ಹೆದ್ದಾರಿ ತಡೆಗೋಡೆ ಬಿರುಕು
ಉಪ್ಪಿನಂಗಡಿಯ ಶಾಲಾ ರಸ್ತೆಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ನಿರ್ಮಿಸಲಾದ ಬಲು ಎತ್ತರವಾದ ತಡೆಗೋಡೆಯಲ್ಲಿ ಬಿರುಕು ಕಾಣಿಸಿರುವುದನ್ನು ವಿಡಿಯೋ ದೃಶ್ಯಾವಳಿಯಲ್ಲಿ ಕಂಡ ಶಾಸಕರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಹೆದ್ದಾರಿ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿದರು.
ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವೇಗಸ್, ತಹಸೀಲ್ದಾರ್ ಪುರಂದರ ಹೆಗ್ಡೆ, ಪುತ್ತೂರು ಪೌರಾಯುಕ್ತ ಮಧು ಎಸ್., ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ರೈ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು, ಉಪ್ಪಿನಂಗಡಿ ಹೋಬಳಿ ಮಟ್ಟದ ವಿವಿಧ ಗ್ರಾಮಗಳ ಕಂದಾಯ ಇಲಾಖಾಧಿಕಾರಿಗಳು, ವಿವಿಧ ಸಂ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ದೋಷಾರೋಪಣೆ ಮಾಡಿ ತಾನೇ ಸಿಕ್ಕಿಬಿದ್ದ!
ಹಲವು ವರ್ಷಗಳಿಂದ ಪೇಟೆಯ ತ್ಯಾಜ್ಯ ನದಿಗೆ ಹರಿಯ ಬಿಡಲಾಗುತ್ತಿದೆ. ಇದನ್ನು ತಡೆಗಟ್ಟಲು ಹಲವು ಸಭೆಗಳಲ್ಲಿ ನಿರ್ಣಯ ಕೈಗೊಂಡಿದ್ದರೂ ಒಂದು ಹನಿ ತ್ಯಾಜ್ಯ ನದಿ ಸೇರುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಕೆಂಪಿಮಜಲು ನಿವಾಸಿಯೋರ್ವ ಆರೋಪಿಸಿದರು. ಕೂಡಲೇ ಸ್ಪಂದಿಸಿದ ಪಿಡಿಒ, ದೂರು ನೀಡಿದ ವ್ಯಕ್ತಿಯ ಮನೆಯ ತ್ಯಾಜ್ಯವೂ ನದಿ ಸೇರುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಿಂದಲಾದರೂ ಇಂಗು ಗುಂಡಿ ರಚಿಸಿ ಎಂದು ವಿನಂತಿಸಿದರೂ ಸ್ಪಂದಿಸಿಲ್ಲ ಎಂದಾಗ ಶಾಸಕರು ಆಕ್ರೋಶಗೊಂಡು ನಾಗರಿಕರು ತಮ್ಮ ಕರ್ತವ್ಯ ಮೊದಲು ನಿರ್ವಹಿಸಬೇಕು ಎಂದರು.
ಬಡವರ ಮೇಲಿರಲಿ ಮಾನವೀಯತೆ
ಬಡವರ ಮನೆಯು ಗಾಳಿ ಮಳೆಗೆ ಹಾನಿಗೊಂಡರೆ ಸ್ಥಳ ಪರಿಶೀಲನೆ ನಡೆಸುವ ಕಂದಾಯ ಇಲಾಖಾಧಿಕಾರಿಗಳು ನಷ್ಟವನ್ನು ಕಡಿಮೆ ಅಂದಾಜಿಸುವುದರಿಂದ ಬಡವರಿಗೆ ಅನ್ಯಾಯವೆಸಗಿದಂತಾಗುತ್ತದೆ. ಮನೆಯೊಂದರ ಛಾವಣಿಯ ಕಾಲು ಭಾಗ ಹಾನಿಗೊಂಡರೆ ಅದನ್ನು ಪೂರ್ಣವಾಗಿ ತೆರವು ಮಾಡಿ ಮತ್ತೆ ನಿರ್ಮಿಸಬೇಕಾಗುತ್ತದೆ. ಇದಕ್ಕೆ ಕಡಿಮೆ ನಷ್ಟ ಅಂದಾಜಿಸಿದರೆ ಆ ಬಡವ ಸರ್ಕಾರಿ ಸೌಲಭ್ಯದಿಂದ ವಂಚಿತನಾಗುತ್ತಾನೆ. ಬಡವರ ಜತೆ ವ್ಯವಹರಿಸುವಾಗ ಮಾನವೀಯತೆಯ ನಡೆಯನ್ನು ತೋರಿ ಎಂದು ಶಾಸಕರು ಕಂದಾಯ ಇಲಾಖಾಧಿಕಾರಿಗಳಿಗೆ ವಿನಂತಿಸಿದರು.
ಖಾಸಗಿ ಭೂಮಿಯಲ್ಲಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವರೇ ಮಾತುಕತೆಯ ಮಾರ್ಗೋಪಾಯಗಳನ್ನು ಅನುಸರಿಸಬೇಕು. ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹೆದ್ದಾರಿ ಬಗ್ಗೆ ಇಲಾಖೆ ಹೆಚ್ಚಿನ ನಿಗಾವಿರಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಜರುಗಿಸಬೇಕು, ಪ್ರವಾಹದಂತಹ ವಿಕೋಪದ ಸಮಯದಲ್ಲಿ ಎನ್‌ಡಿಆರ್‌ಎಫ್ ತಂಡದೊಂದಿಗೆ ಸ್ಥಳೀಯ ಗೃಹರಕ್ಷಕ ದಳ ಮತ್ತು ಈಜುಪಟುಗಳ ಸಹಕಾರ ಪಡೆಯಬೇಕು. ಅಶೋಕ್ ಕುಮಾರ್ ರೈ ಶಾಸಕ