ಗಂಗೊಳ್ಳಿ: ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸರಿಯಾದ ವಿದ್ಯುತ್ ಪೂರೈಕೆ ಮಾಡದೇ ಇರುವುದು, ವಿದ್ಯುತ್ ಇದ್ದಾಗಲೂ ಐಸಿಯು ಘಟಕ ಮತ್ತು ಔಷಧಗಳನ್ನು ಶೀಥಲೀಕರಣದಲ್ಲಿ ಇಡುವ ವ್ಯವಸ್ಥೆಗೆ ವಿದ್ಯುತ್ ಪೂರೈಕೆ ಮಾಡದೇ ರೋಗಿಗಳಿಗೆ ಸಮಸ್ಯೆಯಾಗುವಂತೆ ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತುರ್ತು ಗಮನಹರಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಐಸಿಯು ಘಟಕಕ್ಕೆ ವಿದ್ಯುತ್ ಪೂರೈಸದೇ ನಿರ್ಲಕ್ಷೃ ತೋರಲಾಗುತ್ತಿದೆ. ಇಡೀ ಸರ್ಕಾರಿ ಆಸ್ಪತ್ರೆ ವ್ಯವಸ್ಥಿತವಾಗಿ ಹಾಳು ಮಾಡುವ ಷಡ್ಯಂತರ ಕೆಲವರು ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಬಿಂಬಿಸಲು ಹೀಗೆ ಮಾಡಲಾಗುತ್ತಿದೆ. ಮುಂದೇ ಇದೇ ದೊಡ್ಡ ದುರಂತಕ್ಕೂ ಕಾರಣವಾಗಬಹುದು. ಹೀಗಾಗಿ ಜಿಲ್ಲಾಡಳಿತ ಇದನ್ನು ಗಮನಿಸಬೇಕು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳೆ ಹೆಚ್ಚು ಇಲ್ಲಿಗೆ ಬರುವುದರಿಂದ ಅವರಿಗೆ ಅಗತ್ಯವಾದ ಚಿಕಿತ್ಸೆ ನೀಡಬೇಕು. ಯಾರನ್ನೋ ಓಲೈಸಲು ಅಥವಾ ಇನ್ನಾವುದೋ ದುರುದ್ದೇಶದಿಂದ ಆಸ್ಪತ್ರೆಯಲ್ಲಿ ಇರುವ ವ್ಯವಸ್ಥೆ ಹಾಳು ಮಾಡುವುದು ಸರಿಯಲ್ಲ. ರೋಗಿಗಳಿಗೆ ಅಗತ್ಯವಾಗಿ ಬೇಕಿರುವ ಐಸಿಯು ವ್ಯವಸ್ಥೆ ಮತ್ತು ಔಷಧ ಶೇಖರಿಸಿಡುವ ಘಟಕಕ್ಕೆ ವಿದ್ಯುತ್ ಪೂರೈಕೆ ಮಾಡಬೇಕು. ವೈಯುಕ್ತಿಕ ಹಿತಾಸಕ್ತಿ ಸಾಧನೆಗೆ ಆಸ್ಪತ್ರೆಯಲ್ಲಿನ ವ್ಯವಸ್ಥೆಗೆ ಕುಂದುಂಟು ಮಾಡುವವರ ವಿರುದ್ಧ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು. ಈ ಭಾಗದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಮೂಲಕ ಉತ್ತಮ ಗುಣಮಟ್ಟದ ಸೇವೆ ನೀಡುವಂತಾಗಬೇಕು ಎಂದು ಹೇಳಿದ್ದಾರೆ.